Advertisement

ದುಶ್ಚಟಕ್ಕೆ ದಾಸನಾದಲ್ಲಿ ಆರೋಗ್ಯಕ್ಕೆ ಹಾನಿ

04:51 PM Aug 20, 2017 | |

ದಾವಣಗೆರೆ: ದೇವರು ನಮಗೆ ಅಮೂಲ್ಯವಾದ ಶರೀರ ಎಂಬ ವರ ನೀಡಿದ್ದಾನೆ. ಮಾನವ ಇಂದು ದುಶ್ಚಟಗಳಿಗೆ ದಾಸನಾಗಿ ಆರೋಗ ಹಾನಿ ಮಾಡಿಕೊಳ್ಳುತ್ತಿದ್ದಾನೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ. ನಗರದ ಬಸವಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕ್ತಮಠ, ಶಿವಯೋಗಾಶ್ರಮ ಟ್ರಸ್ಟ್‌ ವತಿಯಿಂದ ಶನಿವಾರ ಬೆಳಿಗ್ಗೆ ಬಂಬೂಬಜಾರ್‌ನಲ್ಲಿ ಹಮ್ಮಿಕೊಂಡಿದ್ದ ದುಶ್ಚಟಗಳಿಂದ ಸಾರ್ವಜನಿಕರನ್ನು ಮುಕ್ತಿಗೊಳಿಸುವ ಜಯದೇವ ಜೋಳಿಗೆ
ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ಎಲ್ಲಾ ಅಪರಾಧಗಳ ತಾಯಿ ಕುಡಿತ. ಆ ದುಶ್ಚಟದಿಂದ
ಅತ್ಯಾಚಾರ, ಕೊಲೆ, ಜೀವ ಹಿಂಸೆ, ಕಳ್ಳತನ, ವಾಹನಗಳ ಅಪಘಾತ, ಜಗಳ, ಗಲಾಟೆ ನಡೆಯುತ್ತಿವೆ ಎಂದರು. ಬಂಬೂಬಜಾರ್‌ನ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಿಂದ ಮೇದಾರ ಗುರುಪೀಠದ ಶ್ರೀ ಬಸವಕೇತಕೇಶ್ವರ ಸ್ವಾಮೀಜಿ ಅವರೊಂದಿಗೆ ಜೋಳಿಗೆ ಹಿಡಿದು ಮನೆ ಹಾಗೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಸ್ವಾಮೀಜಿ, ಬೀಡಿ-ಸಿಗರೇಟ್‌, ಗುಟಕಾ, ಮದ್ಯಪಾನದಿಂದ ಆಗುವ ದುಷ್ಪಾರಿಣಾಮದ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿದರಲ್ಲದೆ, ಅವುಗಳಿಂದ ದೂರ ಇರುವಂತೆ ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಕೆಲವರ ಬಳಿ ಇದ್ದ ಪಾನ್‌ಪರಾಗ್‌, ಬೀಡಿ, ತಂಬಾಕು, ಸಿಗರೇಟುಗಳನ್ನು ಜಯದೇವ ಜೋಳಿಗೆಯಲ್ಲಿ ಹಾಕಿಸಿಕೊಂಡು, ಅವುಗಳಿಂದ ದೂರ ಉಳಿಯುವಂತೆ ಪ್ರಮಾಣ ಮಾಡಿಸಿ, ಅವರಿಗೆ ವಿಭೂತಿ, ರುದ್ರಾಕ್ಷಿ ಧಾರಣೆ ಮಾಡಿದರು. ಬೀಡಿ, ಸಿಗರೇಟು, ತಂಬಾಕು, ಮದ್ಯಪಾನದಿಂದ ಆರೋಗ್ಯ ಕೆಡುವುದರ ಜೊತೆಗೆ, ಮನಸ್ಸಿನ, ಕುಟುಂಬದವರ ನೆಮ್ಮದಿ ಹಾಳಾಗಿ ಕಲಹಕ್ಕೆ ಕಾರಣವಾಗುತ್ತದೆ. ಹಣವೂ ಹಾಳಾಗುತ್ತದೆ. ದುಶ್ಚಟಕ್ಕೆ ಖರ್ಚು ಮಾಡುವ ಹಣವನ್ನು ಆರೋಗ್ಯ ವೃದ್ಧಿಗೆ ಪೂರಕವಾದ
ಆಹಾರ ಪದಾರ್ಥ, ಹಣ್ಣುಗಳನ್ನು ತಿನ್ನಬೇಕು. ಇಲ್ಲವೆ ಬಡವರಿಗೆ ದಾನ ಮಾಡಿ ನೆಮ್ಮದಿ ಕಾಣಬೇಕೆಂದು ಸಲಹೆ
ನೀಡಿದರು. ಮೇದಾರ ಸಮಾಜದ ಅಧ್ಯಕ್ಷ ಟಿ.ಬಸವರಾಜ್‌ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ
ಕೆ.ಹನುಮಂತಪ್ಪ, ಉಪಾಧ್ಯಕ್ಷ ಪಾಪಣ್ಣ, ಖಜಾಂಚಿ ಎಚ್‌.ವಿ.ಗಿರೀಶ್‌, ಸಮಾಜದ ಯುವ ಘಟಕದ ಜಿ.ಎಂ.
ಉಮೇಶ್‌, ಎಚ್‌.ರಾಘವೇಂದ್ರ, ಇತರರು ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next