Advertisement
ಕಾಮಗಾರಿಗೆ 2 ಹಂತಗಳಲ್ಲಿ ಯೋಜನೆ ಸಿದ್ಧಗೊಂಡು ಟೆಂಡರು ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರತ್ಯೇಕ 2 ಕಂಪೆನಿಗಳಿಗೆ ಗುತ್ತಿಗೆ ಮಂಜೂರು ಆಗಿರುವುದಾಗಿ ತಿಳಿದು ಬಂದಿದೆ.
ಅಡ್ಡಹೊಳೆಯಿಂದ ಪೆರಿಯ ಶಾಂತಿ ತನಕ 15 ಕಿ.ಮೀ.ಯ ಮೊದಲ ಹಂತದ ಕಾಮಗಾರಿ 317 ಕೋಟಿ ರೂ. ಅನುದಾನದಲ್ಲಿ ಮಹಾರಾಷ್ಟ್ರ ಪುಣೆ ಮೂಲದ ಎಸ್.ಎಂ. ಔತಾಡೆ ಪ್ರೈ.ಲಿ. ಕಂಪೆನಿಗೆ ಟೆಂಡರ್ ಮಂಜೂರಾತಿ ಆಗಿದೆ. ಶಿರಾಡಿ ಗ್ರಾಮದ ಉದನೆಯಲ್ಲಿ ಪ್ಲಾಂಟ್ ನಿರ್ಮಾಣಕ್ಕೆ ಜಾಗ ಗುರುತಿಸಿದ್ದು, ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಮಳೆ ಕಡಿಮೆ ಆದ ತತ್‌ಕ್ಷಣ ಕಾಮಗಾರಿ ಆರಂಭಿಸಿ 2 ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಎಸ್.ಎಂ. ಔತಾಡೆ ಪ್ರೈ.ಲಿ. ಕಂಪೆನಿಯ ಪ್ರಾಜೆಕ್ಟ್ ಮ್ಯಾನೇಜರ್ ಮಹೇಶ್ವರ ರೆಡ್ಡಿ, ತಿಳಿಸಿದ್ದಾರೆ. ಈ ಭಾಗದಲ್ಲಿ ರಸ್ತೆಯ ಇಕ್ಕೆಲದಲ್ಲಿ ರಕ್ಷಿತಾರಣ್ಯ ಇದೆ. ಪೆರಿಯಶಾಂತಿಯು ಆನೆ ಸೇರಿದಂತೆ ಇತರ ವನ್ಯ ಜೀವಿಗಳು ಹೆಚ್ಚಾಗಿ ಸಂಚರಿಸುವ ಪ್ರದೇಶವಾಗಿರುವುದರಿಂದ ವಿಶೇಷ ವಲಯವಾಗಿ ಗುರುತಿಸಲಾಗಿದೆ. ಇಲ್ಲಿ ಆನೆ ಕಾರಿಡಾರ್, ಪ್ರಾಣಿಗಳ ದಾಟು ಸೇತುವೆ ನಿರ್ಮಾಣ ಆಗಲಿದೆ.
Related Articles
2ನೇ ಹಂತದಲ್ಲಿ ಪೆರಿಯ ಶಾಂತಿಯಿಂದ ಬಿ.ಸಿ. ರೋಡ್ ತನಕ 49 ಕಿ.ಮೀ. ಕಾಮಗಾರಿಗೆ 1,600 ಕೋಟಿ ರೂ. ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೈದರಾಬಾದ್ ಮೂಲದ ಕೆ.ಎನ್.ಆರ್. ಸಂಸ್ಥೆಗೆ ಕಾಮಗಾರಿ ಗುತ್ತಿಗೆ ಮಂಜೂರು ಆಗಿದೆ.
Advertisement
ಕಲ್ಲಡ್ಕ ಪೇಟೆಯಲ್ಲಿ 2.5 ಕಿ.ಮೀ. ಉದ್ದದ ಮೇಲ್ಸೇತುವೆ, ಉಪ್ಪಿನಂಗಡಿ ಮತ್ತು ನೆಲ್ಯಾಡಿ ಸೇರಿದಂತೆ 10 ಕಡೆಗಳಲ್ಲಿ ಸರ್ವೀಸ್ ರೋಡ್ ಮತ್ತು ಅಂಡರ್ ಪಾಸ್ ಹಾಗೂ ಪೆರಿಯಶಾಂತಿಯಲ್ಲಿ ಧರ್ಮಸ್ಥಳ ಕಡೆಗೆ ಹೋಗುವ ತಿರುವಿನಲ್ಲಿ ಓವರ್ ಪಾಸ್ ನಿರ್ಮಾಣ ಆಗಲಿದೆ.
ಮಳೆಯಿಂದಾಗಿ ವಿಳಂಬಈ ಹಿಂದೆ ಅಡ್ಡಹೊಳೆಯಿಂದ ಬಿ.ಸಿ.ರೋಡ್ ತನಕ 64 ಕಿ.ಮೀ. ರಸ್ತೆಗೆ 1,200 ಕೋಟಿ ರೂ. ಮಂಜೂರು ಆಗಿ ಎಲ್‌ಆ್ಯಂಡ್‌ಟಿ ಸಂಸ್ಥೆ 2017ರ ಮಾರ್ಚ್ 28ರಂದು ಕಾಮಗಾರಿ ಆರಂಭಿಸಿತ್ತು. 2019ರ ಸೆಪ್ಟಂಬರ್ 23ಕ್ಕೆ ಕಾಮಗಾರಿ ಮುಗಿಯಬೇಕಿತ್ತು. ಆದರೆ ಭಾರೀ ಮಳೆಯಿಂದಾಗಿ ಪ್ರಾಥಮಿಕ ಹಂತದ ಕಾಮಗಾರಿ ಹಾನಿಗೀಡಾಗಿ ಸ್ಥಗಿತವಾಗಿತ್ತು. ಅಡ್ಡಹೊಳೆಯಿಂದ ಪೆರಿಯಶಾಂತಿ ತನಕ ಆನೆಗಳ ಓಡಾಟ ಹೆಚ್ಚು. ಈ ಹಿಂದೆ ರಾ.ಹೆ. ಪ್ರಾಧಿಕಾರ ಸೂಚಿಸಿದ ಆನೆ ಕಾರಿಡಾರ್ ನಿರ್ಮಾಣ ಅವೈಜ್ಞಾನಿಕವಾಗಿದ್ದರಿಂದ ಅರಣ್ಯ ಇಲಾಖೆ ಆಕ್ಷೇಪಿಸಿತ್ತು. ಹೊಸ ಪ್ರಸ್ತಾವನೆಯಂತೆ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಖಾತೆಯು ಶಿರಾಡಿಯ ಕೊಡ್ಯಕಲ್ಲಿನಲ್ಲಿ 75 ಮೀ. ಅಗಲ ಮತ್ತು 6 ಮೀ. ಎತ್ತರದ ಆನೆ ಕಾರಿಡಾರ್ ಮತ್ತು ರಸ್ತೆಯ ಇಕ್ಕೆಲಗಳಲ್ಲಿ 500 ಮೀ. ಆನೆ ಪಥ ನಿರ್ಮಿಸುವಂತೆ ಸೂಚಿಸಿದ್ದು, ರಾ.ಹೆ. ಪ್ರಾಧಿಕಾರವೂ ಸಮ್ಮತಿಸಿದೆ. ಕಾಮಗಾರಿಗೆ ಅರಣ್ಯ ಇಲಾಖೆಯ ಸಹಕಾರ ಇರುತ್ತದೆ.
– ಮಧುಸೂದನ್, ವಲಯ ಅರಣ್ಯಾಧಿಕಾರಿ, ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ