Advertisement

ವೀರಶೈವ ಲಿಂಗಾಯತ ಓಬಿಸಿ ಪಟ್ಟಿಗೆ ಸೇರಿಸಿ

05:11 PM Aug 03, 2022 | Team Udayavani |

ಹಾವೇರಿ: ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ(ಓಬಿಸಿ)ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ರಾಜ್ಯದಲ್ಲಿ ಕಳೆದ 60 ವರ್ಷಗಳಿಂದ ವೀರಶೈವ-ಲಿಂಗಾಯತ ಸಮುದಾಯವನ್ನು ಇತರೆ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದ್ದು, ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವುದರಿಂದ ಕೇಂದ್ರ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳಿಂದ ಸಮಾಜ ವಂಚಿತವಾಗಿದೆ.

ವೀರಶೈವ-ಲಿಂಗಾಯತ ಸಮುದಾಯ ಬಹುತೇಕ ಕೃಷಿ ಮತ್ತು ಕೃಷಿ ಆಧಾರಿತ ಕಸುಬುಗಳನ್ನು ಅವಲಂಬಿಸಿದ್ದು, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿದೆ. ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಸೇರದೇ ಇರುವ ಕಾರಣ ನಮ್ಮ ಸಮುದಾಯದ ಜನರು ದಶಕಗಳಿಂದ ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಕೇಂದ್ರ ಸರ್ಕಾರದ ನೇಮಕಾತಿ ಅವಕಾಶಗಳಿಂದ ವಂಚಿತರಾಗಿದ್ದಾರೆಂದು ದೂರಿದರು.

ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವೀರಶೈವ ಲಿಂಗಾಯತ 16 ಉಪ ಪಂಗಡಗಳು ಮಾತ್ರ ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿದ್ದು ಸೌಲಭ್ಯ ಪಡೆಯುತ್ತಿವೆ. ಜನಸಂಖ್ಯಾ ದೃಷ್ಟಿಯಿಂದ ಇವು ಅತೀ ಸಣ್ಣ ಉಪ ಪಂಗಡಗಳಾಗಿದ್ದು, ಇನ್ನುಳಿದ ಬಹುತೇಕ ಉಪ ಪಂಗಡಗಳು ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಿಂದ ಹೊರಗುಳಿದಿವೆ. ಹಾಗಾಗಿ, ಸಮಾಜಕ್ಕೆ ಸೌಲಭ್ಯ ದೊರೆಯದಂತಾಗಿದೆ.

ಇನ್ನುಳಿದಿರುವ ಉಪ ಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿ ಸೌಲಭ್ಯ ದೊರೆಯುವಂತೆ ಮಾಡಿದರೆ ಇಡೀ ಸಮುದಾಯದ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಇಲ್ಲವಾದಲ್ಲಿ ಉಳಿದ ಉಪ ಪಂಗಡದವರು ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದರು.

Advertisement

ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಒಳಗೊಂಡಂತೆ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವ ಮೂಲಕ ಸಮುದಾಯಕ್ಕೆ ಸೌಲಭ್ಯ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂಬ ಎಚ್ಚರಿಸಿ ಮನವಿ ಸಲ್ಲಿಸಿದರು.

ಈ ವೇಳೆ ಮಹಾಸಭಾ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಅಥಣಿ ವೀರಣ್ಣ, ಜಿಲ್ಲಾಧ್ಯಕ್ಷ ಎಂ.ಎಸ್‌.ಕೋರಿಶೆಟ್ಟರ್‌, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ ಕಡ್ಲಿ, ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ವಿಶ್ವನಾಥ ಅಂಕಲಕೋಟಿ, ಶಂಭು ಚಕ್ಕಡಿ, ವೀರೇಶ ನೀರಲಗಿ, ಅನಸೂಯಾ ಯರವಿನತಲೆ, ಶಿವಕುಮಾರ ದೇಶಮುಖ, ಮೃತ್ಯುಂಜಯ ಬುಕ್ಕಶೆಟ್ಟಿ, ಚಂದ್ರಣ್ಣ ಸೊಪ್ಪಿನ, ಅಜ್ಜಪ್ಪ ರೊಟ್ಟಿ, ಪ್ರಭು ಮರಗೂರ, ಪ್ರಭು ಹಿಟ್ನಳ್ಳಿ, ರವಿ ಶೆಟ್ಟರ, ಮಹೇಶ ಮಲಗುಂದ, ನಿಂಗಪ್ಪ ಪೂಜಾರ, ಉಳಿವೆಪ್ಪ ಹಲಗಣ್ಣನವರ, ಕಲ್ಯಾಣಕುಮಾರ ಶೆಟ್ಟರ, ಬಸವರಾಜ ಹಾದಿಮನಿ, ರಾಜು ಮುಂಡಾಸದ, ಶ್ವೇತಾ ತುಪ್ಪದ, ಕಮಲಾ ಬುಕ್ಕಶೆಟ್ಟಿ, ದಾಕ್ಷಾಯಿಣಿ ಗಾಣಗೇರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next