ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಆಡಳಿತ ಮಂಡಳಿ ಗಮನಹರಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯು ನಿರ್ದೇಶನ ನೀಡಿದೆ.
2022ರ ಜ.1ಕ್ಕೆ 18 ವರ್ಷ ತುಂಬುವ ಹಾಗೂ ಇಲ್ಲಿಯವರೆಗೂ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳದ ವಿದ್ಯಾರ್ಥಿಗಳ ಹೆಸರನ್ನು ನೋಂದಣಿ ಮಾಡಲು ಜಾಗೃತಿ ಮೂಡಿಸಬೇಕು.
ಈ ಮೂಲಕ ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ನೋಂದಣಿ ಮಾಡಿಸುವ ಸಂಬಂಧ ಕಾಲೇಜಿನ ಪ್ರಾಂಶುಪಾಲರು/ಅಧ್ಯಾಪಕರು ಕ್ರಮ ಕೈಗೊಳ್ಳಬೇಕು. ಹೆಸರನ್ನು ಸೇರ್ಪಡೆ ಮಾಡಿಸುವುದಕ್ಕಾಗಿ ಕಾಲೇಜಿನ ಸೂಚನಾಫಲಕ, ತರಗತಿಗಳಲ್ಲಿ ಮತ್ತು ವಾಟ್ಸ್‌ಆ್ಯಪ್ ಮೂಲಕ ಹೆಚ್ಚಿನ ಪ್ರಚಾರ ಮಾಡಬೇಕು.
ಇದನ್ನೂ ಓದಿ:ಸೂರ್ಯ ಹೊಣೆಯಲ್ಲ: ವಿಷಾದ ವ್ಯಕ್ತಪಡಿಸಿದ ‘ಜೈ ಭೀಮ್’ ನಿರ್ದೇಶಕ
ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ಸ್ವೀಕೃತಿ ಪ್ರತಿಯನ್ನು ಪರಿಶೀಲಿಸಿ ಜಂಟಿ ನಿರ್ದೇಶಕರ ಕಚೇರಿಗೆ ಕಳುಹಿಸಿಕೊಡುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಿದ್ದಾರೆ.