Advertisement

ಮತದಾರ ಪಟ್ಟಿಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ

07:31 PM Dec 16, 2020 | Suhan S |

ಶಿವಮೊಗ್ಗ: ಕೋವಿಡ್ ಹಿನ್ನೆಲೆಯಲ್ಲಿ ಕಾಲೇಜುಗಳು ಇನ್ನೂ ಸರಿಯಾಗಿ ಆರಂಭಗೊಳ್ಳದಿರುವುದರಿಂದ, ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಕುರಿತು ವಿಶೇಷ ಪ್ರಯತ್ನ ನಡೆಸಬೇಕು ಎಂದು ಶಿವಮೊಗ್ಗ ಜಿಲ್ಲಾ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವೀಕ್ಷಕ ಉಜ್ವಲ್‌ ಕುಮಾರ್‌ ಘೋಷ್‌ ಸೂಚಿಸಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿ ಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ದ್ವಿತೀಯ ಪಿಯು ಮತ್ತು ಪದವಿ ಕಾಲೇಜುಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಯಾದಿಯನ್ನುಪಡೆದುಕೊಂಡು ಅದರಲ್ಲಿ ಮತದಾರರ ಪಟ್ಟಿಯಲ್ಲಿಇನ್ನೂ ಸೇರ್ಪಡೆಗೊಳ್ಳದಿರುವ ವಿದ್ಯಾರ್ಥಿಗಳನ್ನು ಗುರುತಿಸಬೇಕು. ಮತದಾರರ ಪಟ್ಟಿಗೆ ಸೇರಲು ಅರ್ಹರಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಆಯಾ ಮತಗಟ್ಟೆ ಅಧಿಕಾರಿಗೆ ಸಲ್ಲಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕ್ರಮಕೈಗೊಳ್ಳಬೇಕು. ವಿದ್ಯಾರ್ಥಿಗಳು ಹೆಸರು ನೋಂದಾಯಿಸಲು ಅನುಕೂಲವಾಗುವಂತೆ ಅರ್ಜಿ ನಮೂನೆ-6ಎಲ್ಲಾ ಕಾಲೇಜುಗಳಲ್ಲಿ ಲಭ್ಯವಿರಬೇಕು. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಎಲ್ಲಾ ಅರ್ಹ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಸಂದರ್ಭದಲ್ಲಿ ಕುಟುಂಬದ ಎಲ್ಲಾ ಸದಸ್ಯರೂ ಒಂದೇ ಮತಗಟ್ಟೆ ವ್ಯಾಪ್ತಿಯಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು. ಈ ಕುರಿತು ಬಿಎಲ್‌ಒಗಳಿಗೆ ಸೂಕ್ತ ತರಬೇತಿ ನೀಡಬೇಕು. ಎರಡು ಮತಗಟ್ಟೆಗಳಲ್ಲಿ ಹೆಸರು ಹೊಂದಿರುವ ಮತದಾರರನ್ನು ಗುರುತಿಸಿ ಅದನ್ನು ಸರಿಪಡಿಸಬೇಕು. ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಮೊದಲು ಕಡ್ಡಾಯವಾಗಿ ಅವರಿಗೆ ನೊಟೀಸು ಜಾರಿಗೊಳಿಸಬೇಕು. ಮತದಾರರ ಸಂಪೂರ್ಣವಿಳಾಸವನ್ನು ಸರಿಯಾಗಿ ದಾಖಲಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು 18,73,978ಜನಸಂಖ್ಯೆಯಿದ್ದು, 2020ರ ಅಂತಿಮ ಮತದಾರರ ಪಟ್ಟಿ ಪ್ರಕಾರ 14,47,314 ಮತದಾರರು ಇದ್ದಾರೆ. ಇವರಲ್ಲಿ 719288 ಪುರುಷ ಹಾಗೂ 728026 ಮಹಿಳಾ ಮತದಾರರು ಇದ್ದು, ಲಿಂಗಾನುಪಾತ ಸರಾಸರಿ ಒಂದು ಸಾವಿರ ಪುರುಷ ಮತದಾರರಿಗೆ1011 ಮಹಿಳಾ ಮತದಾರರು ಇದ್ದಾರೆ. 2021ರಕರಡು ಮತದಾರರ ಪಟ್ಟಿ ಪ್ರಕಾರ 14,54,201 ಮತದಾರರು ಇದ್ದಾರೆ.

ಇವರಲ್ಲಿ 18-19ರ ವಯೋಮಾನದ 17,088, 20-29 ವಯೋಮಾನದ 2,87,501, 30-29 ವಯಸ್ಸಿನ 3,49,300, 40-49 ವಯೋಮಾನದ 3,11,659, 50-59 ವಯೋಮಾನದ 2,44,584, 60-69 ವಯೋಮಾನದ 1,52,855, 70-79 ವಯೋಮಾನದ 71,671, 80-89 ವಯೋಮಾನದ 22,458, 90-99ವಯೋಮಾನದ 4,071 ಮತ್ತು 100ವರ್ಷ ದಾಟಿದ 199 ಮತದಾರರು ಇದ್ದಾರೆ ಎಂದು ಹೇಳಿದರು.

Advertisement

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್‌. ವೈಶಾಲಿ ಅವರು ಸ್ವೀಪ್‌ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಶಿವಮೊಗ್ಗ ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next