ಚಾಮರಾಜನಗರ: ಹಳೆ ಮೈಸೂರು ಪ್ರಾಂತ್ಯದಲ್ಲಿರುವ ಗೌಡ ಲಿಂಗಾಯತ, ಒಕ್ಕಲಿಗ ಲಿಂಗಾಯತ, ಪಂಚಮಸಾಲಿ ಲಿಂಗಾಯತ ಸಮುದಾಯಗಳನ್ನು ಪ್ರವರ್ಗ 2 ಎಗೆ ಸೇರಿಸಬೇಕು ಎಂದು ಬಿಜೆಪಿ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಂಚಾಮಸಾಲಿ ಸಮುದಾಯ ಒಕ್ಕಲುತನ ಅವಲಂಬಿಸುವ ಮೂಲಕ ಬಹಳ ಕಷ್ಟದಲ್ಲಿ ಜೀವನಸಾಗಿಸುತ್ತಿದ್ದಾರೆ. ಅವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಹಳೆ ಮೈಸೂರು ಭಾಗದ ಗೌಡ ಲಿಂಗಾಯತ, ಒಕ್ಕಲಿಗ ಲಿಂಗಾಯತ, ಪಂಚಮಸಾಲಿ ಲಿಂಗಾಯತರು ಶೇ.80 ರಷ್ಟು ಮತ ನೀಡಿ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಕರ್ತರಾಗಿದ್ದಾರೆ. ಈ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿಲ್ಲ. ಈ ಸಮುದಾಯದಲ್ಲಿ ಐಪಿಎಸ್, ಐಎಎಸ್‌ಅಧಿಕಾರಗಳಿಲ್ಲ. ಇದಕ್ಕೆ ಕಾರಣ ಮೀಸಲಾತಿ ಕೊರತೆ. ಆದ್ದರಿಂದ ಈಸಮುದಾಯಗಳನ್ನು ಪ್ರವರ್ಗ 2ಎಗೆ ಸೇರಿಸಬೇಕೆಂದರು.
ಗೌಡ ಲಿಂಗಾಯತ ಮಠಗಳು ಈ ಭಾಗದಲ್ಲಿ ಭಕ್ತಾದಿಗಳಿಂದ ಎಲ್ಲವನ್ನು ಪಡೆದು ಸಮಾಜದ ಅಭಿವೃದ್ಧಿ ಬಗ್ಗೆ ಏಕೆ ಚಿಂತಿಸುತ್ತಿಲ್ಲ? ಸಿದ್ಧಗಂಗಾ ಮಠ,ಸುತ್ತೂರುಮಠ, ದೇವನೂರು ಮಠ ಸೇರಿದಂತೆ ಅನೇಕ ಮಠಗಳು ಗೌಡ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಪಂಚಾಮಸಾಲಿ ಮಠಾಧೀಶರ ಮಾದರಿಯಲ್ಲಿ ಗೌಡ ಲಿಂಗಾಯತ ಮಠಗಳು ಮನಸ್ಸು ಮಾಡಿ ಹೋರಾಟ ರೂಪಿಸಲು ಮುಂಚೂಣಿಗೆ ಬರಬೇಕು ಎಂದು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಈ ಭಾಗದ ಗೌಡ ಲಿಂಗಾಯತ ಹಿರಿಯರು, ಮುಖಂಡರ ಸಭೆ ಕರೆದು ಚರ್ಚಿಸಲಾಗುತ್ತದೆ. ಅಷ್ಟರೊಳಗೆ ಬಿಎಸ್‌ವೈ ಅವರು ಗೌಡ ಲಿಂಗಾಯತ ಸಮುದಾಯವನ್ನು ಪ್ರವರ್ಗ 2 ಎಗೆ ಸೇರಿಸಬೇಕು. ಇಲ್ಲವೇ ಅವರ ಪುತ್ರ ವಿಜಯೇಂದ್ರ ಅವರು ಹೋರಾಟದನಾಯಕತ್ವ ವಹಿಸಿಕೊಳ್ಳಬೇಕು. ಸಮಗ್ರ ವೀರಶೈವ ಲಿಂಗಾಯತ ಸಮುದಾಯ ವನ್ನು ಒಬಿಸಿ ಪಟ್ಟಿಗೆ ಸೇರಿಸಲು ಮುಂದಾಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೊತ್ತಲವಾಡಿ ಮಹದೇವಕುಮಾರ್, ಎಂಆರ್ ಎಫ್ ಮಹೇಶ, ಅರಕಲವಾಡಿ ಮಹೇಶ್, ಗೌಡಿಕೆ ಸುರೇಶ್, ಸತೀಶ್, ಗಜೇಂದ್ರ ಇತರರಿದ್ದರು.