ಅಫಜಲಪುರ: ಮಾಜಿ ಮುಖ್ಯ ಸಚೇತಕ, ಕೋಲಿ ಸಮಾಜದ ಧೀಮಂತ ನಾಯಕ ದಿ| ವಿಠಲ್ ಹೇರೂರ ಕನಸಿನಂತೆ ಕೋಲಿ ಕಬ್ಬಲಿಗ, ಬೇಡ, ಬೆಸ್ತ, ಮೋಗವೀರ ಸೇರಿದಂತೆ 33 ಹೆಸರುಗಳಿಂದ ಕರೆಯಲ್ಪಡುವ ಗಂಗಾ ಮತಸ್ಥರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಕೆಲಸವನ್ನು ಮಾಡಿಯೇ ಮಾಡುತ್ತೇನೆ ಎಂದು ಮಾಜಿ ಸಚಿವ ಗಡಿ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದರು.
ತಾಲೂಕಿನ ಹಾವಳಗಾದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸಾಂಸ್ಕೃತಿಕ ಸೇವಾ ಸಂಘದ ವತಿಯಿಂದ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಜಯಂತಿ, ಕೋಲಿ ಸಮಾಜದ ಪರಿವರ್ತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮಾತನಾಡುತ್ತಾ ಕೋಲಿ ಸಮಾಜ ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಹೊಂದಿದ್ದರೂ ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಬಹಳಷ್ಟು ಹಿಂದುಳಿದಿದೆ. ಹೀಗೆ ಹಿಂದುಳಿದ ಸಮಾಜವನ್ನು ಮೇಲೆತ್ತುವ ಕೆಲಸ ಮಾಡುವ ನಿಟ್ಟಿನಲ್ಲಿ ಎಸ್ ಟಿಗೆ ಸೇರಿಸುವ ಕೆಲಸ ನಡೆಯುತ್ತಿದೆ.
ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದ್ದು ನಾಲ್ಕು ದಿನಗಳ ನಂತರ ಪುನಃ ಕೇಂದ್ರ ನಾಯಕರೊಂದಿಗೆ ಭೇಟಿಯಾಗಿ ಈ ಕುರಿತು ಚರ್ಚಿಸುತ್ತೇನೆ ಎಂದರು. ಅಂಬೇಡ್ಕರ್ ವಾದಿ, ರಾಜ್ಯ ಬಿಎಸ್‌ಪಿ ಅಧ್ಯಕ್ಷ ಎನ್. ಮಹೇಶ, ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಉತ್ಪಾದಕ ವರ್ಗವಾಗಿರುವ ಹಿಂದುಳಿದ, ದಲಿತ ವರ್ಗಗಳು ಇಂದಿನ ರಾಜಕೀಯ, ಸಾಮಾಜಿಕ, ಆರ್ಥಿಕ ಗುಲಾಮಗಿರಿಯ ಹೊಡೆತಕ್ಕೆ ಸಿಕ್ಕು ಬೇಡುವ ವರ್ಗದಂತಾಗಿದೆ.
ನಮ್ಮಲ್ಲಿ ತಿಳಿವಳಿಕೆ, ಸಂಘಟನೆ ಕೊರತೆ ಇದೆ. ಹಿಂದುಳಿದ ವರ್ಗಗಳೆಲ್ಲ ಒಂದಾಗಬೇಕು ಎಂದಾಗ ನಮ್ಮ ಪಾಲಿನ ಹಕ್ಕುಗಳನ್ನು ನಾವು ಅನುಭವಿಸಲು ಸಾಧ್ಯ ಎಂದರು. ಕೋಲಿ ಸಮಾಜದ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸರ್ಕಾರ ನಿಜಶರಣ ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮ ರಚಿಸಿ 200 ಕೋಟಿ ರೂ. ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿದ್ದೇನೆ.
ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಸಿಂದಗಿ ಮಾಜಿ ಶಾಸಕ ಶರಣಪ್ಪ ಸುಣಗಾರ, ಡಾ| ಮಲ್ಲಿಕಾರ್ಜುನ ಮುಕ್ಕಾ, ಶರಣಪ್ಪ ಮಾನೇಗಾರ, ಪತ್ರಕರ್ತ ಸೂರ್ಯಕಾಂತ ಜಮಾದಾರ, ಕರವೇ ಜಿಲ್ಲಾಧ್ಯಕ್ಷ ಶಿವುಕುಮಾರ ನಾಟೀಕಾರ, ತಾಪಂ ಸದಸ್ಯ ವಿಠಲ ನಾಟೀಕಾರ,
ಚೌಡಯ್ಯ ಗುರು ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಅಥಣಿಯ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಮುಖಂಡರಾದ ಬಸವರಾಜ ಸಪ್ಪನಗೋಳ, ಶರಣಪ್ಪ ಕಣ್ಮೆàಶ್ವರ, ಶೋಭಾ ಬಾಣಿ, ಶಂಕು ಮ್ಯಾಕೇರಿ, ಬಾಬುರಾವ್ ಜಮಾದಾರ, ರಾಜು ಉಕ್ಕಲಿ, ಭೀಮಾಶಂಕರ ಹೊನ್ನಕೇರಿ, ಬಲವಂತ ಜಕಬಾ, ಬಾಬು ಜಮಾದಾರ ಇದ್ದರು.