ಮುಂಬಯಿ: ಡಾಲರ್ ಎದುರು ರೂಪಾಯಿ ಮೌಲ್ಯ 33 ಪೈಸೆ ಏರಿಕೆಯಾಗಿದ್ದು, ದೇಶಿಯ ಇಕ್ವಿಟಿ ಮಾರುಕಟ್ಟೆಯಲ್ಲಿನ ಲಾಭಗಳು ಮತ್ತು ಅಮೆರಿಕ, ಚೀನಾ ವ್ಯಾಪಾರ-ಮಾತುಕತೆ ಬಂಡವಾಳ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದರ ಪರಿಣಾಮ ಈ ಬೆಳವಣಿಗೆಯಾಗಿದೆ ಎನ್ನಲಾಗಿದೆ.
ಅಮೆರಿಕ ಮತ್ತು ಚೀನಾ ವ್ಯಾಪಾರ ಒಪ್ಪಂದ ನೀತಿ ಯಶಸ್ವಿ ಕಾಣುವ ಹಂತದಲ್ಲಿದ್ದು, ಈ ಬೆಳವಣಿಗೆ ಸ್ಥಳೀಯ ಘಟಕದ ವ್ಯಾಪಾರ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ಇದರ ಪ್ರತಿಫಲವಾಗಿ ಡಾಲರ್ ಎದುರು ರೂಪಾಯಿ ಮೌಲ್ಯ 70.50 ರಷ್ಟು ದಾಖಲಾಗಿದೆ ಎಂದು ವಿದೇಶೀ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.
ಅಂತರಬ್ಯಾಂಕ್ ವಿದೇಶಿ ವಿನಿಮಯ ಕೇಂದ್ರದಲ್ಲಿ 70.54 ರೂ. ಕ್ಕೆ ಪ್ರಾರಂಭವಾದ ವ್ಯಾಪಾರ ವಹಿವಾಟು ಮಧ್ಯಾಹ್ನದ ವೇಳೆಗೆ ಕುಸಿತ ಕಂಡಿತ್ತು. ಆದರೆ ಮಾರುಕಟ್ಟೆ ಅಂತ್ಯವಾಗುವ ಸಮಯಕ್ಕೆ ಚೇತರಿಸಿಕೊಂಡ ರೂಪಾಯಿ 70.50 ರ ಗರಿಷ್ಠ ಮಟ್ಟವನ್ನು ಮುಟ್ಟುವ ಮೂಲಕ 33 ಪೈಸೆ ಏರಿಕೆ ಕಂಡಿದೆ.
ಒಟ್ಟಾರೆ ಬಿಎಸ್‌ಸಿ ಸೆನ್ಸೆಕ್ಸ್ 269.32 ಪಾಯಿಂಟ್‌ಗಳ ಏರಿಕೆ ಕಂಡು 40,851.03 ದಾಖಲಾಗಿದ್ದು, ನಿಫ್ಟಿ 72.95 ಪಾಯಿಂಟ್‌ಗಳ ಏರಿಕೆಯಾಗುವ ಮೂಲಕ 12,044.75 ಕ್ಕೆ ತಲುಪಿದೆ.
ಇನ್ನೂ ತಾತ್ಕಾಲಿಕ ವಿನಿಮಯ ಅಂಕಿ-ಅಂಶಗಳ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಶುಕ್ರವಾರ 683.83 ಕೋಟಿ ರೂ. ಗೆ ಶೇರುಗಳನ್ನು ಮಾರಾಟ ಮಾಡಿದ್ದು, ಜಾಗತಿಕ ಕಚ್ಚಾ ತೈಲ ಧಾರಣೆ ಶೇ.0.72 ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್ಗೆ 64.66 ಡಾಲರ್ ರಷ್ಟು ವಹಿವಾಟು ನಡೆಸಿದೆ.
ಗುರುವಾರ, ಅಮೆರಿಕ ಡಾಲರ್ ವಿರುದ್ಧ ರುಪಾಯಿ 70.83 ಮೌಲ್ಯ ದಾಖಲಿಸಿತ್ತು.