ವಿಜಯಪುರ: ಕೋವಿಡ್-19 ಎಸ್‌ಒಪಿ ಅನ್ವಯ ಗ್ರಾಮ ಪಂಚಾಯತ್ ಚುನಾವಣೆ ನಡೆಸಬೇಕು. ಇದರ ಮೇಲ್ವಿಚಾರಣೆಗೆ ನೇಮಿಸಲ್ಪಟ್ಟಿರುವ ತಾಲೂಕು ನೋಡಲ್ ಆರೋಗ್ಯ ಅಧಿಕಾರಿಗಳು, ಎಎನ್‌ಎಂ, ಆಶಾ ಕಾರ್ಯಕರ್ತೆಯರು, ಅಗತ್ಯ ಆಂಬ್ಯುಲೆನ್ಸ್ ವ್ಯವಸ್ಥೆ ಸೇರಿದಂತೆ ಇತ್ಯಾದಿಗಳ ಮೇಲ್ವಿಚಾರಣೆ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ| ಔದ್ರಾಮ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆಗಳ ತರಬೇತಿ ಕಾರ್ಯಕ್ರಮ, ಮಸ್ಟರಿಂಗ್ ಹಾಗೂ ಎಣಿಕೆ ಕೇಂದ್ರಗಳಲ್ಲಿ ಒಂದು ಕೋವಿಡ್ ತಪಾಸಣಾ ತಂಡವನ್ನು ನಿಯೋಜಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಕೋವಿಡ್ -19 ಸೋಂಕಿತರು, ಮತದಾನದ ದಿನ ತಪಾಸಣೆಯಿಂದ ಕಂಡು ಬಂದ ಕೋವಿಡ್ ಶಂಕಿತರು ಮತಗಟ್ಟೆಗಳಿಗೆ ತೆರಳಿ ಖುದ್ದು ಮತದಾನ ಮಾಡಲು ಇಚ್ಛಿಸಿದ್ದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಲಿಖೀತ ಮನವಿ ಸಲ್ಲಿಸಬೇಕು ಎಂದು ತಿಳಿಸಿದರು.
ಸಂಬಂಧಪಟ್ಟ ಕೋವಿಡ್-19 ಕೇರ್ ಕೇಂದ್ರದ ಆರೋಗ್ಯಾಧಿಕಾರಿ ಸೋಂಕಿತರಿಗೆ ಮತದಾನ ಮಾಡಲು ಅನುಮತಿ ನೀಡಿದ್ದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಶಂಕಿತರು-ಸೋಂಕಿತರ ಕುರಿತು ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಸಂಬಂಧಪಟ್ಟ ಮತಗಟ್ಟೆಗಳಿಗೆಮತದಾನದ ಕೊನೆಯ ಒಂದು ಗಂಟೆಯ ಅವ ಧಿಯಲ್ಲಿ ಕರೆ ತಂದು ಮತದಾನದ ನಂತರ ಅವರನ್ನು ಸ್ವಸ್ಥಾನಕ್ಕೆ ಮರಳಿ ಕರೆದೊಯ್ಯಬೇಕ ಎಂದು ಸೂಚಿಸಿದರು.
ಪ್ರತಿ ಮತಗಟ್ಟೆಗಳಿಗೆ ಒಬ್ಬರಂತೆ ಆಶಾ ಕಾರ್ಯಕರ್ತೆಯನ್ನು ಅಥವಾ ಆರೋಗ್ಯ ಕಾರ್ಯಕರ್ತರನ್ನು ನೇಮಿಸಿದ ಬಗ್ಗೆ ಯಾದಿಯನ್ನು ಆಯಾ ತಾಲೂಕಿನ ತಹಶೀಲ್ದಾರ್‌ಗೆ ಸಲ್ಲಿಸಬೇಕು. ಪ್ರತಿ ಮತಗಟ್ಟೆಗಳಿಗೆ ಒಬ್ಬರಂತೆ ಆಶಾ ಕಾರ್ಯಕರ್ತೆಯನ್ನು ಅಥವಾ ಆರೋಗ್ಯ ಕಾರ್ಯಕರ್ತರಿಗೆ ಗೌರವಧನ ಪಾವತಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ವಿಜಯಪುರ ತಹಶೀಲ್ದಾರ್ ಮೋಹನಕುಮಾರಿ, ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕ ಮೆಕ್ಕಳಕಿ ಸೇರಿದಂತೆ ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಎಲ್ಲ ತಾಲೂಕಿನ ತಹಶೀಲ್ದಾರ್‌ಗಳು ಪಾಲ್ಗೊಂಡಿದ್ದರು.