Advertisement
ನಗರದಲ್ಲಿ ಈಗಾಗಲೇ ಪೂರ್ಣಗೊಂಡಿರುವ ಎಡಿಬಿ 1ನೇ ಯೋಜನೆಯಲ್ಲಿ ಸಾಕಷ್ಟು ಲೋಪ ಹಾಗೂ ಸಮಸ್ಯೆಗಳೇ ಕಾಣಿಸಿಕೊಂಡ ಕಾರಣದಿಂದ ಇದೀಗ ಎರಡನೇ ಎಡಿಬಿ ಯೋಜನೆಯ ಮೇಲೆ ಬಹಳಷ್ಟು ನಿರೀಕ್ಷೆಯಿದೆ. ಜತೆಗೆ, ಪಾಲಿಕೆಯ ಕಾಂಗ್ರೆಸ್ ಆಡಳಿತದಲ್ಲಿ ಈ ಯೋಜನೆಗೆ ಅನುಮೋದನೆ ದೊರೆತಿದ್ದು, ಇದೀಗ ಹೊಸ ಆಡಳಿತ ಬಿಜೆಪಿಗೆ ಈ ಯೋಜನೆಯನ್ನು ಪರಿಣಾಮಕಾರಿ ರೀತಿಯಲ್ಲಿ ನಿರ್ವಹಿಸುವ ಬಹುದೊಡ್ಡ ಜವಾಬ್ದಾರಿಯಿದೆ.
ಹರಿಯಾಣ ಮೂಲದ ಸಂಸ್ಥೆಯು ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಕಾಮಗಾರಿ ಸಂಬಂಧ ನ. 21ರಂದು ಗುತ್ತಿಗೆದಾರರ ಜತೆಗೆ ಪಾಲಿಕೆ ಕರಾರು ಒಪ್ಪಂದ ಮಾಡಿಕೊಂಡಿದೆ. 5 ತಿಂಗಳವರೆಗೆ ಗುತ್ತಿಗೆದಾರ ಸಂಸ್ಥೆಯು ಯೋಜನೆಯ ರೂಪರೇಖೆ, ವಿನ್ಯಾಸ ಸಿದ್ಧಪಡಿಸಲಿದೆ. ಎಪ್ರಿಲ್ ಸುಮಾರಿಗೆ ಕಾಮಗಾರಿ ಆರಂಭವಾಗಲಿದ್ದು, ಮೂರು ವರ್ಷದೊಳಗೆ ಪೂರ್ಣಗೊಳ್ಳಬೇಕಾಗಿದೆ. ಆ ಬಳಿಕ 3 ತಿಂಗಳು ಪರಿಶೀಲನ ಹಂತ ನಡೆದು, 8 ವರ್ಷಗಳ ಕಾಲ ಕಾರ್ಯಾಚರಣೆ, ನಿರ್ವಹಣೆ ನಡೆಸಲಾಗುತ್ತದೆ. ಏನೆಲ್ಲ ಕಾಮಗಾರಿ ?
ಮಂಗಳೂರಿನ 60 ವಾರ್ಡ್‌ಗಳ ಪ್ರತೀ ಮನೆಗೆ 24×7 ನಿರಂತರ ಶುದ್ಧ ನೀರು ಸರಬರಾಜು ಮಾಡಲು ಕ್ರಮವಹಿಸುವುದು ಈ ಯೋಜನೆಯ ಗುಖ್ಯ ಗುರಿ. ಜತೆಗೆ, ನಗರದ ವಿವಿಧ ಬಡಾವಣೆಗಳಲ್ಲಿ ಹಾಲಿ ಇರುವ ಮೇಲ್ಮಟ್ಟದ ಜಲಸಂಗ್ರಹಗಾರದ ಜತೆಗೆ 20 ಹೆಚ್ಚುವರಿ ವಿವಿಧ ಸಾಮರ್ಥಯಗಳ ಮೇಲ್ಮಟ್ಟದ ಜಲಸಂಗ್ರಹಾಗಾರಗಳ ನಿರ್ಮಾಣ ಮಾಡಲಾಗುತ್ತದೆ ಹಾಗೂ ಹಾಲಿ ಇರುವ ನೆಲಮಟ್ಟದ ಜಲಸಂಗ್ರಹಾಗಾರದ ಜತೆಗೆ 2 ಹೆಚ್ಚುವರಿ ವಿವಿಧ ಸಾಮರ್ಥಯದ ನೆಲಮಟ್ಟದ ಜಲಸಂಗ್ರಹಾಗಾರವನ್ನೂ ನಿರ್ಮಿಸಲಾಗುತ್ತದೆ.
Related Articles
ನಗರದ 8 ಕಡೆಗಳಲ್ಲಿ ಹೆಚ್ಚುವರಿ ಬೂಸ್ಟಿಂಗ್ ಪಂಪ್‌ಹೌಸ್‌ಗಳ ನಿರ್ಮಾಣ, ಹಾಲಿ ಇರುವ ಪಣಂಬೂರು ಹಾಗೂ ಬೆಂದೂರ್‌ನಲ್ಲಿರುವ ಸಂಸ್ಕರಣಾ ಘಟಕದ ಬದಲು ತುಂಬೆ ರಾಮಲ್‌ಕಟ್ಟೆಯ 18 ಎಂಜಿಡಿ ಸಾಮರ್ಥಯದ ಶುದ್ಧೀಕರಣ ಘಟಕದ ಬಳಿಯಲ್ಲಿಯೇ ಹೊಸದಾಗಿ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗುತ್ತದೆ. ಜತೆಗೆ ನಗರದಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ 20 ಜಲಸಂಗ್ರಹಾಗಾರಕ್ಕೆ ಹಾಗೂ ಹಾಲಿ ಇರುವ ಕೆಲವು ಶುದ್ಧ ಕೊಳವೆ ಮಾರ್ಗದ ಸಾಮರ್ಥ್ಯ ಕುಂಠಿತಗೊಂಡಿರುವುದರಿಂದ ಸುಮಾರು 65 ಕಿ.ಮೀ. ಕೊಳವೆ ಮಾರ್ಗವನ್ನು ಬದಲಾಯಿಸುವುದು, ಹೊಸ ಕೊಳವೆಗಳನ್ನು ಅಳವಡಿಸಲಾಗುತ್ತದೆ.
Advertisement
ಪ್ರತೀ ಮನೆಗೆ “ವಾಟರ್ ಮೀಟರ್’ಕುಡ್ಸೆಂಪ್ ಯೋಜನೆಯಡಿ ಅಳವಡಿಸಿರುವ ವಿತರಣ ಜಾಲದ ಜತೆಗೆ ಹೆಚ್ಚುವರಿಯಾಗಿ 1,388 ಕಿ.ಮೀ. ಉದ್ದದ ಎಚ್‌ಡಿಪಿಇ ವಿತರಣಾ ಜಾಲ ಅಳವಡಿಸಲಾಗುತ್ತದೆ. ಅಗೆತ ಮಾಡಿದ ರಸ್ತೆಗಳನ್ನು (ಕಾಂಕ್ರೀಟ್, ಡಾಂಬರ್ ಇತ್ಯಾದಿ) ಯಥಾಸ್ಥಿತಿಗೆ ಸಂಪೂರ್ಣ ರೀತಿಯಲ್ಲಿ ನಿರ್ವಹಿಸಲಾಗುತ್ತದೆ. ಪ್ರತೀ ಮನೆ ಸಂಪರ್ಕಕ್ಕೆ ಹೊಸದಾಗಿ ಕ್ಲಾಸ್-ಬಿ “ಮಲ್ಟಿಜೆಟ್ ವಾಟರ್ ಮೀಟರ್’ ಅಳವಡಿಸಲಾಗುತ್ತದೆ. ತುಂಬೆಯ ನೀರು ಶುದ್ಧೀಕರಣ ಘಟಕದಿಂದ ಎಲ್ಲ ಜಲಸಂಗ್ರಹಾಗಾರದವರೆಗೆ ಗಣಕೀಕ ರಣಗೊಳಿಸಿ ಎಸ್‌ಸಿಎಡಿಎ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಈ ಮೂಲಕ ನೀರು ಸೋರಿಕೆ, ಅನಧಿಕೃತ ಸಂಪರ್ಕದ ಬಗ್ಗೆ ಮಾಹಿತಿ ತಿಳಿದು ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. ಯೋಜನೆ ವರದಿ
– ಕಾಮಗಾರಿ ಅವಧಿ: 3 ವರ್ಷ
– ಯೋಜನೆಯ ಗುತ್ತಿಗೆ ಮೊತ್ತ: 792.42 ಕೋ.ರೂ.ಕಾಮಗಾರಿ ವೆಚ್ಚ : 587.67 ಕೋ.ರೂ.
– ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚ : 204.75 ಕೋ.ರೂ. (8 ವರ್ಷಗಳ ಅವಧಿ)- ನೀರು ವಿತರಣ ವ್ಯವಸ್ಥೆ ಬಲಪಡಿಸಲು ಒತ್ತು
ಮಂಗಳೂರಿಗೆ ಜಲಸಿರಿ ಯೋಜನೆಯ ಕಾಮಗಾರಿಗೆ ಇದೀಗ ಚಾಲನೆ ನೀಡಲಾಗಿದೆ. ಕೆಯುಐಡಿಎಫ್‌ಸಿ ವತಿಯಿಂದ ಎಡಿಬಿ ನೆರವಿನ ಕ್ವಿಮಿಪ್ ಯೋಜನೆಯಡಿ ನಗರಕ್ಕೆ 24×7 ನೀರು ಸರಬರಾಜು ವ್ಯವಸ್ಥೆಯ ವಿತರಣ ಜಾಲದ ಬಲಪಡಿಸುವಿಕೆ, 8 ವರ್ಷಗಳ ಅವಧಿಗೆ ಕಾರ್ಯಾಚರಣೆ, ನಿರ್ವಹಣೆ ಒಳಗೊಂಡ ಕಾಮಗಾರಿ ಇದಾಗಿದೆ.
- ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆಯುಕ್ತರು, ಮನಪಾ