Advertisement

ನಗರಸಭೆ: ಎಡಿಬಿ ಸಾಲದ ಶೂಲ! : ಕೋಟ್ಯಂತರ ರೂ. ಬಡ್ಡಿ ಕಟ್ಟಲೇ ಆಗಿಲ್ಲ

04:20 AM Aug 04, 2017 | Team Udayavani |

ಪುತ್ತೂರು: ಅಭಿವೃದ್ಧಿ ಹಾಗೂ ಆದಾಯಕ್ಕೆ ಹೂಡಿಕೆ ದೃಷ್ಟಿಯಿಂದ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನಿಂದ (ಎಡಿಬಿ) 10 ವರ್ಷಗಳ ಹಿಂದೆ ಪಡೆದ 58 ಕೋಟಿ ರೂ. ಸಾಲವನ್ನು ಮರು ಪಾವತಿಸಲಾಗದೇ ಜಪ್ತಿಯ ಭೀತಿ ಎದುರಿಸುತ್ತಿದೆ. 2003 – 04ರಲ್ಲಿ ಪುತ್ತೂರು ಪುರಸಭೆ (ಇಂದಿನ ನಗರಸಭೆ) ಎಡಿಬಿಯಿಂದ ಸಾಲ ಪಡೆದು ಅಭಿವೃದ್ಧಿ ಮತ್ತು ಹೂಡಿಕೆ ಎಂಬ ವಿಂಗಡಣೆ ಮಾಡಿತ್ತು. ಹೂಡಿಕೆ ಯೋಜನೆಗೆ ಶೇ. 4ರಷ್ಟು ಬಡ್ಡಿ ನಿಗದಿ ಮಾಡಲಾಗಿತ್ತು. ಕುಡ್ಸೆಂಪ್‌ ಸಂಸ್ಥೆ ಇದರ ಅನುಷ್ಠಾನ ಮಾಡಿತ್ತು. ಒಟ್ಟು 58 ಕೋಟಿ ರೂ.ನಲ್ಲಿ ಕೆಲಭಾಗ ಅನುದಾನ ರೂಪದಲ್ಲಿ ಬಂದರೆ, 18 ಕೋಟಿ ರೂ. ಸಾಲದ ರೂಪದಲ್ಲಿ ಲಭಿಸಿತ್ತು.

Advertisement

ಯೋಜನೆಯಲ್ಲಿ ಅಭಿವೃದ್ಧಿ
ಅಭಿವೃದ್ಧಿ ಕಾಮಗಾರಿಗಳಾಗಿ 28 ಕೋಟಿ ರೂ. ವೆಚ್ಚದ ಕುಮಾರಧಾರಾ ನದಿಯ ನೆಕ್ಕಿಲಾಡಿಯಿಂದ ಪುತ್ತೂರಿಗೆ ನೀರು ಪೂರೈಕೆ ಯೋಜನೆ, ಪುರಸಭೆಯ ನೂತನ ಕಟ್ಟಡ ಹಾಗೂ ಕೆಲವು ಭಾಗದಲ್ಲಿ ತರಕಾರಿ ಮಾರುಕಟ್ಟೆ, ನಗರದ ರಸ್ತೆಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗಿತ್ತು. ಹೂಡಿಕೆ ಯೋಜನೆಯಾಗಿ ಬಸ್‌ ನಿಲ್ದಾಣದ ಬಳಿಯ ಹೂವಿನ ಮಾರುಕಟ್ಟೆಯ ಬಳಿ ವಾಣಿಜ್ಯ ಸಂಕೀರ್ಣ, ನೆಲ್ಲಿಕಟ್ಟೆ ಖಾಸಗಿ ಬಸ್‌ ನಿಲ್ದಾಣ, ದರ್ಬೆ- ಬೊಳುವಾರು -ಕಿಲ್ಲೆ ಮೈದಾನ ಸುಲಭ ಶೌಚಾಲಯ ಇತ್ಯಾದಿ ನಿರ್ಮಿಸಲಾಗಿತ್ತು.

ಆದಾಯದ ಮೂಲವಾಗಲಿಲ್ಲ
ಕುಮಾರಧಾರಾ ನದಿಗೆ ಅಣೆಕಟ್ಟು ನಿರ್ಮಿಸಿ ನೀರನ್ನು ಪುತ್ತೂರಿಗೆ ಪೂರೈಸುವ ಯೋಜನೆ ಸಮರ್ಪಕವಾಗಿಲ್ಲ. ನಗರದಲ್ಲಿ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣಗಳ ವಿನ್ಯಾಸ ಸರಿಯಿಲ್ಲದೆ ಆದಾಯವಾಗಿ ಮಾರ್ಪಡುವಲ್ಲಿ ವಿಫಲವಾಗಿದೆ. ಆಗಿನ ಪುರಸಭೆ ಕಾಮಗಾರಿಯ ಗುಣಮಟ್ಟ ಪರೀಕ್ಷಿಸುವ ಮುನ್ನವೇ ಕಾಮಗಾರಿ ಪೂರ್ಣಗೊಂಡಿದೆ ಎಂಬ ವರದಿಯನ್ನು ಕುಡ್ಸೆಂಪ್‌ ನೀಡಿತ್ತು. ಆದರೆ ಇದಾವುದೂ ಆದಾಯದ ಮೂಲವಾಗಿ ಮಾರ್ಪಡದ ಕಾರಣ ಸಾಲ ಸಂದಾಯ ಸಾಧ್ಯವಾಗಿಲ್ಲ ಎಂಬುದು ನಗರಸಭೆಯ, ಕೆಲವು ಸದಸ್ಯರ ಅಭಿಪ್ರಾಯ.

ವಾಣಿಜ್ಯ ಸಂಕೀರ್ಣ ವ್ಯರ್ಥ
ಪುತ್ತೂರು ಬಸ್‌ ನಿಲ್ದಾಣದ ಬಳಿ ಮುಖ್ಯ ರಸ್ತೆ ಪಕ್ಕದಲ್ಲೇ 2 ಮಹಡಿಗಳ 31 ಅಂಗಡಿ ಕೋಣೆ ಹೊಂದಿರುವ ವಾಣಿಜ್ಯ ಸಂಕೀರ್ಣವಿದ್ದರೂ ಬಾಡಿಗೆದಾರರಿಗೆ ಪೂರಕವಾಗಿ ಇಲ್ಲ. ಹಾಗಾಗಿ ಬಹುತೇಕ ಬಾಗಿಲು ಮುಚ್ಚಿವೆ. ಕೋರ್ಟ್‌ ರಸ್ತೆ ವಿಸ್ತರಣೆಗೊಳಿಸುವ ಪ್ರಸ್ತಾವನೆ ಸಂದರ್ಭ ಅಲ್ಲಿದ್ದ ಚಿನ್ನದ ಕೆಲಸಗಾರರನ್ನು ಇಲ್ಲಿಗೆ ಸ್ಥಳಾಂತರಿಸುವ ಯೋಚನೆ ಇದ್ದರೂ ಸಾಧ್ಯವಾಗಲಿಲ್ಲ. ಪ್ರಸ್ತುತ ಭೂತ ಬಂಗಲೆಯಂತೆ ಕಾಣುವ ಈ ಕಟ್ಟಡದಿಂದ ಆದಾಯ ಬಾರದ ಸ್ಥಿತಿ ಇದೆ.

ಸುಮಾರು 98 ಲಕ್ಷ ರೂ. ವೆಚ್ಚದಲ್ಲಿ ಪುರಸಭೆ ಆಡಳಿತ ಸಂಕೀರ್ಣ ಮತ್ತು ದಿನವಹೀ ಮಾರುಕಟ್ಟೆ ನಿರ್ಮಿಸಲಾಯಿತು. ಪುತ್ತೂರು ಸಂತೆ ನಡೆಯುತ್ತಿದ್ದ ಜಾಗದಲ್ಲೇ ಈ ಕಟ್ಟಡ ನಿರ್ಮಿಸಲಾಯಿತು. ನೂರಾರು ವ್ಯಾಪಾರಿಗಳಿದ್ದ ಸಂತೆಗೆ ಹೊಸ ಕಟ್ಟಡದಲ್ಲಿ ಸಿಕ್ಕಿದ್ದು ಕೇವಲ 29 ಮಳಿಗೆ. ಹೀಗಾಗಿ ಸಂತೆಯನ್ನು ಕಿಲ್ಲೆ ಮೈದಾನಕ್ಕೆ ಸ್ಥಳಾಂತರಿಸಿದ್ದರಿಂದ ಮಳಿಗೆಗಳನ್ನು ನಗರ ಸಭೆಯ ಕಚೇರಿ ಕೆಲಸಗಳಿಗೆ ಬಳಸಲಾಯಿತು. ಎಡಿಬಿ ಸಾಲ ಯೋಜನೆಯಲ್ಲಿ ಮುಖ್ಯ ರಸ್ತೆಗಳಿಗೆ ಡಾಮರು ಹಾಕಿ ಚರಂಡಿ ನಿರ್ಮಿಸಿರುವುದು ಮಾತ್ರ ಫ‌ಲ ಕೊಟ್ಟಿದ್ದು, ಸಾರ್ವಜನಿಕರಿಗೆ ಅನುಕೂಲವಾಗಿದೆ.

Advertisement

ಸಾಲ ಬಾಕಿ ಎಷ್ಟು ?
ಎಡಿಬಿ ಮೂಲಕ ಲಭಿಸಿದ 58 ಕೋಟಿ ರೂ.ಗಳಲ್ಲಿ ಕೆಲವು ಯೋಜನೆಗಳಿಗೆ ಶೇ. 50 ಮತ್ತು ಬೇರೆ ಯೋಜನೆಗಳಿಗೆ ಶೇ. 100ರಷ್ಟು ಅನುದಾನ ದೊರೆತಿದೆ. ಇವುಗಳನ್ನು ಹೊರತುಪಡಿಸಿ ಸುಮಾರು 18 ಕೋಟಿ ರೂ. ಸಾಲ ಇದೆ. ಇದನ್ನು ವಾರ್ಷಿಕವಾಗಿ 2 ಕೋಟಿ ರೂ.ನಂತೆ ನಗರಸಭೆ ಪಾವತಿಸಬೇಕಿತ್ತು. ಸುಮಾರು 10 ವರ್ಷಗಳಿಂದ ಬಡ್ಡಿ ಪಾವತಿಸದೇ ಇರುವುದರಿಂದ ಬಡ್ಡಿಯೇ ಕೋಟಿ ಲೆಕ್ಕದಲ್ಲಿ ಬೆಳೆದಿದೆ.

ಆಸ್ತಿ ಜಪ್ತಿಯ ಭೀತಿ
ಸಾಲ ಪಡೆವಾಗ ಪುರಸಭೆ ನೀಡಿದ ಬಾಂಡ್‌ನ‌ಲ್ಲಿ ಉಲ್ಲೇಖೀಸಿದಂತೆ ಸಾಲ ಮರುಪಾವತಿ ಅಸಾಧ್ಯವಾದರೆ ನಗರಸಭೆ ಹೂಡಿಕೆ ಯೋಜನೆಯಲ್ಲಿದ್ದ ಆಸ್ತಿಯನ್ನು ಎಡಿಬಿ ಜಪ್ತಿ ಮಾಡಿಕೊಳ್ಳಬಹುದು ಎಂದಿದೆ. ಅದರಂತೆ ಜಪ್ತಿಯ ಭಯ ನಗರಸಭೆಯನ್ನು ಆವರಿಸಿದೆ.

ನಮ್ಮಿಂದ ಸಾಧ್ಯವಿಲ್ಲ 
10 ವರ್ಷಗಳ ಹಿಂದೆ ಎಡಿಬಿಯಲ್ಲಿ ಮಾಡಿಟ್ಟ ಸಾಲದ ರಾಶಿಯ ಕುರಿತು ಅನೇಕ ಬಾರಿ ಸಭೆಯಲ್ಲಿ ಚರ್ಚೆಯಾಗಿದೆ. ನಾವಂತೂ ಈಗ ಸಾಲ ಕಟ್ಟುವ ಸಾಮರ್ಥ್ಯ ಹೊಂದಿಲ್ಲ. ಸರಕಾರವೇ ಏನಾದರೂ ಮಾಡಬೇಕು.
– ಜಯಂತಿ ಬಲ್ನಾಡು, ನಗರಸಭೆ ಅಧ್ಯಕ್ಷೆ

ಖಂಡಿತಾ ಲೋಪವಿಲ್ಲ
ಯೋಜನೆಯ ವಿನ್ಯಾಸದಲ್ಲಿ ಖಂಡಿತಾ ಲೋಪವಿಲ್ಲ. ನೀರಿನ ಯೋಜನೆಯ ಕುರಿತಂತೆ ಸಂಪರ್ಕಗಳ ಸಂಖ್ಯೆ ಕಡಿಮೆ ಇದೆ. ಕೆಲವರಿಗೆ ಬಿಲ್‌ ನೀಡುತ್ತಿಲ್ಲ, ಇನ್ನು ಕೆಲವರಿಂದ ಬಿಲ್‌ ವಸೂಲಿ ಮಾಡುತ್ತಿಲ್ಲ. ಪೊಲೀಸ್‌ ಠಾಣೆ ಹಾಗೂ ಕ್ವಾರ್ಟರ್ಸ್‌ನಿಂದಲೇ 2 ಲಕ್ಷ ರೂ. ನೀರಿನ ಶುಲ್ಕ ಬಾಕಿಯಾಗಿರುವ ಕುರಿತು 2 ವರ್ಷಗಳ ಹಿಂದೆಯೇ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಲಭಿಸಿತ್ತು. ಈ ರೀತಿಯಲ್ಲಿ ಬೇಜವಾಬ್ದಾರಿ ವಹಿಸಲಾಗಿದೆ. ಇದೀಗ ಒಳಚರಂಡಿ ಯೋಜನೆಗೆ ಎಡಿಬಿ ಮೂಲಕವೇ ಸಾಲ ಪಡೆಯಲು ಯೋಜನೆ ರೂಪಿಸುತ್ತಿರುವುದು ಹೇಗೆ ಎಂಬುದೇ ತಿಳಿಯುತ್ತಿಲ್ಲ.
– ಡಾ| ನಿತ್ಯಾನಂದ ಪೈ, ಬಳಕೆದಾರರ ಹಿತರಕ್ಷಣಾ ವೇದಿಕೆ

– ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next