ಕಲಬುರಗಿ: ಭಾರತೀಯ ಜನತಾ ಪಕ್ಷವನ್ನು ಜಿಲ್ಲೆಯಲ್ಲಿ ಕೆಳಹಂತದಿಂದ ಸಂಘಟಿಸಿದ ಕೀರ್ತಿ ದಿವಂಗತ ಚಂದ್ರಶೇಖರ ಪಾಟೀಲ ಅವರಿಗೆ ಸಲ್ಲುತ್ತದೆ. ಶಾಸಕರಾಗಿ ಜನಪ್ರಿಯತೆಗೆ ಸಾಕ್ಷಿ ಎಂಬುದನ್ನು ಅವರು ನಿರೂಪಿಸಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಹೇಳಿದರು.
ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ರವಿವಾರ ಧೀಮಂತ ನಾಯಕ ಆದರ್ಶಗೌಡರು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಶಾಸಕರಾಗಿ ಚಂದ್ರಶೇಖರ ಪಾಟೀಲ ಹೊಂದಿದ್ದ ಜನಪ್ರಿಯತೆ ನಮ್ಮೆಲ್ಲರಿಗೂ ಮಾದರಿ. ಅಧಿಕಾರಕ್ಕಾಗಿ ಅವರು ಎಂದೂ ಆಸೆಪಟ್ಟವರಲ್ಲ.
ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುವಂತೆ ಮಾಡಿದ ಪ್ರಯತ್ನ ನಿಜಕ್ಕೂ ದೊಡ್ಡ ಕಾರ್ಯ. ಈ ಗುಣ ಎಲ್ಲರಲ್ಲೂ ಬರುವಂತದ್ದಲ್ಲ. ಅದು ರೇವೂರ ಗೌಡರಲ್ಲಿತ್ತು ಎಂದರು. ಮಾಜಿ ಸಚಿವ ರೇವು ನಾಯಕ ಬೆಳಮಗಿ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಬೆಳೆಯುವಲ್ಲಿ ತಾವು, ರೇವೂಗೌಡರು ಹಾಗೂ ಬಸವರಾಜ ಸೇಡಂ ಪ್ರಮುಖ ಕಾರಣರು ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದು ಹೇಳಿದರು.
ಶ್ರೀಶೈಲ ಸಾರಂಗಮಠದ ಡಾ| ಸಾರಂಗಧರೇಶ್ವರ ಮಹಾಸ್ವಾಮೀಜಿ ಸಮಾರಂಭ ಉದ್ಘಾಟಿಸಿ, ರೇವೂರ ಗೌಡರು ಎನ್ನುವ ಶಬ್ದದಲ್ಲಿಯೇ ಶಕ್ತಿ ಇದೆ ಎಂಬುದನ್ನು ಈ ಭಾಗಕ್ಕೆ ದಿವಂಗತ ಚಂದ್ರಶೇಖರ ಪಾಟೀಲ ತೋರಿಸಿಕೊಟ್ಟಿದ್ದರು. ಅವರ ಹಾದಿಯಲ್ಲಿಯೇ ಅವರ ಪುತ್ರರಾಗಿರುವ ಶಾಸಕ ದತ್ತಾತ್ರೇಯ ಪಾಟೀಲ ಮುನ್ನಡೆಯುತ್ತಿದ್ದಾರೆ. ಇವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದರು.
ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಚಿಣಮಗೇರಾ ಸಿದ್ಧರಾಮ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಪ್ರೊ| ಬಿ.ಕೆ. ಚಳಗೇರಿ, ಎ.ಕೆ.ರಾಮೇಶ್ವರ, ಬಿ.ಎಸ್.ಬಿರಾದಾರ, ಎಸ್.ಎಸ್. ಗುಬ್ಬಿ, ಅಲೋಕ ಸಿ. ರೇವೂರ, ಆರ್.ಎ. ಚಿನಿವಾಲ ಮುಂತಾದವರಿದ್ದರು. ಪ್ರಾಧ್ಯಾಪಕ ಡಾ| ಚಿ.ಸಿ.ನಿಂಗಣ್ಣ ಕೃತಿ ಕುರಿತು ಮಾತನಾಡಿದರು.