ಲಕ್ಷ್ಮೇಶ್ವರ: ತಾಲೂಕಿನ ಆದರಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿ 4 ವರ್ಷ ಕಳೆದರೂ ಪೂರ್ಣಗೊಳ್ಳದ್ದರಿಂದ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 186 ರ 56 ಮಕ್ಕಳು ಸೌಲಭ್ಯ ವಂಚಿತ ಬಾಡಿಗೆ ಕಟ್ಟಡದಲ್ಲಿಯೇ ಓದುವಂತಾಗಿದೆ.
ಗ್ರಾಮದ 2 ನೇ ವಾರ್ಡ್‌ನಲ್ಲಿ 2016-17 ಗ್ರಾಪಂ (ನರೇಗಾ) ಅನುದಾನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕೈಗೊಳ್ಳಲಾಗಿದೆ. ಪಂಚಾಯತ್‌ರಾಜ್ ಇಂಜನಿಯರಿಂಗ್ ಇಲಾಖೆ ನಿರ್ಮಾಣ ಜವಾಬ್ದಾರಿ ಹೊತ್ತಿದೆ. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡು ವರ್ಷಗಳೇ ಕಳೆದರೂ ಸಣ್ಣ ಪುಟ್ಟ ಕಾಮಗಾರಿಗಳ ಬಾಕಿ ಕಾರಣ ಹಾಕಿದ ಬೀಗ ತೆಗೆದಿಲ್ಲ.
ಅನುದಾನ ಕೊರತೆ, ತಾಂತ್ರಿಕ ಸಮಸ್ಯೆ, ಇಲೆಕ್ಟ್ರಿಕಲ್, ಪ್ಲಂಬಿಂಗ್ ಸೇರಿ ಸಣ್ಣ ಪುಟ್ಟ ಕಾಮಗಾರಿ ಬಾಕಿ ಉಳಿದಿದ್ದರಿಂದ ಹಸ್ತಾಂತರಗೊಳಿಸಲಾಗಿಲ್ಲ ಎನ್ನುತ್ತಾರೆ ಗುತ್ತಿಗೆದಾರರು. ಒಂದೆಡೆ ಲಕ್ಷಾಂತರ ರೂ ಸರ್ಕಾರದ ಅನುದಾನದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದರೆ, ಮತ್ತೂಂದೆಡೆ ಪ್ರತಿ ತಿಂಗಳು ಬಾಡಿಗೆ ನೀಡಿ ಯಾವುದೇ ಸೌಲಭ್ಯವಿಲ್ಲದ ಸಣ್ಣ ಕೊಠಡಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಇದು ಕೇವಲ ಆದರಳ್ಳಿ ಗ್ರಾಮದ ಸಮಸ್ಯೆಯಾಗಿರದೇ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡ ಭಾಗ್ಯ ಇಲ್ಲ.
ಇಲಾಖೆಯ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಒಟ್ಟು 231 ಅಂಗನವಾಡಿ ಕೇಂದ್ರಗಳಲ್ಲಿ 187 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದ 44 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡ, ದೇವಸ್ಥಾನ, ಸಭಾ ಭವನ, ಹಳೆಯ ಶಾಲಾ ಕಟ್ಟಡಗಳಲ್ಲಿ ನಡೆಯುತ್ತಿವೆ. ಆದರೆ ಸರ್ಕಾರ ಲಕ್ಷಾಂತರ ರೂ ಅನುದಾನ ಖರ್ಚು ಮಾಡಿ ಹೊಸ ಕಟ್ಟಡ ನಿರ್ಮಾಣಗೊಳಿಸಿದ್ದರೂ ಮಕ್ಕಳಿಗೆ ಅಲ್ಲಿ ಕಲಿಯುವ ಭಾಗ್ಯ ಕಲ್ಪಿಸದಿರುವುದು ದುರ್ದೈವ ಸಂಗತಿ.