Advertisement

ಎಲಾನ್‌ ಮಸ್ಕ್ ಎಕ್ಸ್‌ ಅಸ್ತ್ರ; ಹೊಸ ಪ್ಲಾರ್ಟ್‌ಫಾರಂ ನಿರ್ಮಾಣಕ್ಕೆ ಟೆಸ್ಲಾ ಮುಖ್ಯಸ್ಥ ಸಜ್ಜು

09:51 AM May 09, 2022 | Team Udayavani |

ವಾಷಿಂಗ್ಟನ್‌: ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್‌ ಮಸ್ಕ್ ಟ್ವಿಟರ್‌ ಖರೀದಿಸಿದ ಬೆನ್ನಲ್ಲೇ ಟ್ವಿಟರ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗುವ ಮುನ್ಸೂಚನೆಗಳು ಸಿಕ್ಕಿವೆ.

Advertisement

ಟ್ವಿಟರ್‌ನಿಂದಲೇ “ಎಕ್ಸ್‌’ ಎಂಬ ಹೆಸರಿನ ಹೊಸ ಉತ್ಪನ್ನವನ್ನು ಹೊರಬಿಡುವ ಯೋಚನೆ ಮಸ್ಕ್ ಗಿದೆ ಎನ್ನುವ ಸುದ್ದಿ ಇದೀಗ ಹೊರಬಿದ್ದಿದೆ.

ಮಸ್ಕ್ ಆಪ್ತವಲಯ ತಿಳಿಸಿರುವ ಪ್ರಕಾರ, ಅವರು 2023ರಲ್ಲಿ “ಎಕ್ಸ್‌’ ಹೆಸರಿನ ಮತ್ತೊಂದು ಪ್ಲಾರ್ಟ್‌ಫಾರಂ ಪರಿಚಯಿಸಲಿದ್ದಾರಂತೆ. ಅದು ಆರಂಭವಾದ ಮೊದಲನೇ ವರ್ಷದಲ್ಲೇ 90 ಲಕ್ಷ ಜನರನ್ನು ಚಂದಾದಾರನ್ನಾಗಿ ಮಾಡಿಕೊಳ್ಳಲಿದೆ. ಹಾಗೆಯೇ 2028ರೊಳಗಾಗಿ “ಎಕ್ಸ್‌’ ಪ್ಲಾಟ್‌ಫಾರಂಗೆ 10.40 ಕೋಟಿ ಮಂದಿ ಚಂದಾದಾರಾಗಲಿದ್ದಾರೆ ಎನ್ನುವುದು ಮಸ್ಕ್ ಅವರ ಅಂದಾಜು.

ಆದರೆ ಇದು ಯಾವ ರೀತಿಯ ಪ್ಲಾಟ್‌ಫಾರಂ ಆಗಿರಲಿದೆ? ಯಾವ ಕ್ಷೇತ್ರಕ್ಕೆ ಸಂಬಂಧಪಟ್ಟಿರಲಿದೆ ಎನ್ನುವ ಯಾವುದೇ ವಿಚಾರ ಇನ್ನೂ ಹೊರಬಿದ್ದಿಲ್ಲ.

ಮಸ್ಕ್ ಕೈ ಹಿಡೀತಾರಾ ಅಡಾರ್‌?
ಭಾರತದಲ್ಲಿ ಟೆಸ್ಲಾ ಉತ್ಪಾದನಾ ಕೇಂದ್ರ ತೆರೆಯಲು ಅನೇಕ ರಾಜಕೀಯ ಮುಖಂಡರು ಮಸ್ಕ್ ಗೆ ಆಹ್ವಾನ ಕೊಟ್ಟ ಬೆನ್ನಲ್ಲೇ ಇದೀಗ ಸೀರಂ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಅಡಾರ್‌ ಪೂನಾನಾಲ ಕೂಡ ಮಸ್ಕ್ ಗೆ ಕರೆ ಕೊಟ್ಟಿದ್ದಾರೆ.
“ನೀವು ಟ್ವಿಟರ್‌ ಖರೀದಿಸಿ ಮುಗಿದಿದ್ದರೆ, ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಟೆಸ್ಲಾ ಕಾರು ಉತ್ಪಾದನೆ ಆರಂಭಿಸಬಹುದೇ? ಇದು ನೀವು ಮಾಡುವ ಅತ್ಯಂತ ಉತ್ತಮ ಹೂಡಿಕೆಯಾಗಿರಲಿದೆ ಎನ್ನುವ ಆಶ್ವಾಸನೆಯನ್ನು ನಾನು ಕೊಡುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

ಔಷಧೀಯ ಉದ್ಯಮದಲ್ಲಿ ಯಶಸ್ಸು ಕಂಡಿರುವ ಅಡಾರ್‌ ಈಗ ಮಸ್ಕ್ ಜತೆ ಕೈಜೋಡಿಸಿ ಆಟೋಮೊಬೈಲ್ಸ್‌ನತ್ತ ಬರಲಿದ್ದಾರೆಯೇ ಎನ್ನುವ ಅನುಮಾನವನ್ನು ಈ ಟ್ವೀಟ್‌ ಹುಟ್ಟುಹಾಕಿದೆ.

ಪರಾಗ್‌ ಪತ್ನಿಗೂ ಲಿಂಕ್‌
ಮಸ್ಕ್ ಟ್ವಿಟರ್‌ ಖರೀದಿಸಲು ಟ್ವಿಟರ್‌ ಸಿಇಒ ಪರಾಗ್‌ ಅಗರ್ವಾಲ್‌ ಅವರ ಪತ್ನಿ ವಿನೀತ ಅಗರ್ವಾಲ್‌ ಸಹಾಯ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಮೂಲತಃ ಸ್ಟಾನ್‌ಫೋರ್ಡ್‌ ಸ್ಕೂಲ್‌ ಆಫ್ ಮೆಡಿಸಿನ್‌ನಲ್ಲಿ ಪ್ರೊಫೆಸರ್‌ ಆಗಿ ಕೆಲಸ ಮಾಡುತ್ತಿರುವ ವಿನೀತ ಆ್ಯಂಡ್ರೆಸ್ಸೆನ್‌ ಹೊರೊವಿಟ್ಸ್‌ ಎಂಬ ಹೆಸರಿನ ಸಂಸ್ಥೆಗೆ ಪಾಲುದಾರರಾಗಿದ್ದಾರೆ. ಅದೇ ಸಂಸ್ಥೆಯೇ ಮಸ್ಕ್ ಟ್ವಿಟರ್‌ ನಿಧಿಗೆ ಹೂಡಿಕೆ ಮಾಡುತ್ತಿದೆ. ಹಾಗಾಗಿ ವಿನೀತ ಹೆಸರು ಮುಖ್ಯಭೂಮಿಕೆಯಲ್ಲಿ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next