ಮೈಸೂರು: ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಹಲವು ಮಹನೀಯರುಗಳು ತತ್ವ, ಆದರ್ಶವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆ ಎಂದು ಸಮಾಜ ಸೇವಕ ಕೆ.ರಘುರಾಂ ಹೇಳಿದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ರಾಮಕೃಷ್ಣ ನಗರ ನಿವಾಸಿಗಳ ಬಳಗದಿಂದ ರಾಮಕೃಷ್ಣ ವೃತ್ತ(ಆಂದೋಲನ ವೃತ್ತ)ದಲ್ಲಿ ಆಯೋಜಿಸಿದ್ದ ಶ್ರೀ ರಾಮಕೃಷ್ಣ ಪರಮಹಂಸರ 132ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ರಾಮಕೃಷ್ಣ ಪರಮಹಂಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸಾಂಸ್ಕೃತಿಕ ರಾಜಧಾನಿ ಮೈಸೂರು ಪಾರಂಪರಿಕ ಇತಿಹಾಸ ಹೊಂದಿದ್ದು ಸ್ವತ್ಛತೆಯ ಪರಿಸರವನ್ನು ಹೊಂದಿದೆ.
ನಗರದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಪ್ರತಿಮೆ ಸ್ಥಾಪಿಸಬೇಕೆಂಬ ಬೇಡಿಕೆ ಇತ್ತು. ಅದರಂತೆ ಆರು ತಿಂಗಳುಗಳ ಹಿಂದೆ ರಾಮಕೃಷ್ಣ ಪರಮಹಂಸರ ಅದ್ಭುತ ಪ್ರತಿಮೆಯನ್ನು ಸ್ಥಾಪಿಸಿರುವುದು ಸಂತಸದ ಸಂಗತಿಯಾಗಿದೆ. ರಾಮಕೃಷ್ಣ ಮಠದ ನೇತೃತ್ವದಲ್ಲಿ ಪ್ರತಿಮೆ ಸ್ಥಾಪಿಸಿ, ಸಂಗೀತ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಅಲ್ಲದೆ ನಗರದ ವಿವೇಕಾನಂದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ, ರಾಮಕೃಷ್ಣ ನಗರ ವೃತ್ತದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಪ್ರತಿಮೆ ಸ್ಥಾಪಿಸಲಾಗಿದೆ. ಅದೇ ರೀತಿ ಶಾರದಾದೇವಿ ನಗರದ ವೃತ್ತದಲ್ಲಿ ಶ್ರೀ ಶಾರದಾದೇವಿ ಪ್ರತಿಮೆ ಸ್ಥಾಪಿಸಿ ಜನರಲ್ಲಿ ವಿದ್ಯಾರ್ಥಿಗಳಲ್ಲಿ ಯುವ ಪೀಳಿಗೆಯಲ್ಲಿ ಅನೇಕ ಮಹನೀಯರುಗಳ ತತ್ವ, ಆದರ್ಶವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ನಂ. ಶ್ರೀಕಂಠಕುಮಾರ್, ನಗರಪಾಲಿಕೆ ಸದಸ್ಯ ಎಂ.ಕೆ.ಶಂಕರ್, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಶ್ರೀಧರ್‌ಮೂರ್ತಿ, ಉಪಾಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸಿ, ಜಯಸಿಂಹ, ರಂಗನಾಥ್, ಸ್ಥಳೀಯ ನಿವಾಸಿಗಳಾದ ಫಣೀಶ್, ಮಂಜುನಾಥ್, ರವೀಂದ್ರ , ರಂಗನಾಥ್ ಕಶ್ಯಪ್ ಮತ್ತಿತರರಿದ್ದರು.