ಮುಂಬಯಿ: ಹಿಂಡೆನ್‌ಬರ್ಗ್ ಸಂಶೋಧನಾ ವರದಿಯ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ವೇಳೆ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು ಕಳೆದ ವರ್ಷ 95 ಪ್ರತಿಶತದಷ್ಟು ಏರಿಕೆಯಾಗಿ 11.6 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ.ಶ್ರೀಮಂತ ಭಾರತೀಯ ಎಂಬ ಹಿರಿಮೆ ಹೊಂದಿದ್ದ ಮುಖೇಶ್ ಅಂಬಾನಿ ಅವರನ್ನು ಅದಾನಿ ಈಗ ಹಿಂದಿಕ್ಕಿದ್ದಾರೆ ಎಂದು ವರದಿಯೊಂದು ಗುರುವಾರ(ಆ 29) ತಿಳಿಸಿದೆ.
2024 ರ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಂಬಾನಿ ಅವರ ಸಂಪತ್ತಿನ ಒಟ್ಟಾರೆ ನಿವ್ವಳ ಮೌಲ್ಯ 25 ಶೇಕಡಾ ಹೆಚ್ಚಿ 10.14 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ.
2023 ರ ವರದಿಯಲ್ಲಿ, ಅದಾನಿ ಅವರ ಸಂಪತ್ತು ಶೇಕಡಾ 57 ರಷ್ಟು ಕುಸಿದು 4.74 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿತ್ತು. ಅಂಬಾನಿ 8.08 ಲಕ್ಷ ಕೋಟಿ ರೂಪಾಯಿಗಳ ಸಂಪತ್ತನ್ನು ಹೊಂದಿದ್ದರು. ಯುಎಸ್ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್‌ನಿಂದ ಹೊರಿಸಲಾದ ವಿವಿಧ ಆರೋಪಗಳ ನಂತರ ಅದಾನಿಯವರ ನಿವ್ವಳ ಮೌಲ್ಯವು ತೀವ್ರವಾಗಿ ಕುಸಿದಿದೆ ಎಂಬುದನ್ನೂ ಗಮನಿಸಬಹುದು. ಎಲ್ಲಾ ಆರೋಪಗಳನ್ನು ಸದ್ಯ ನಿರಾಕರಿಸಲಾಗಿದೆ.
2014 ರಲ್ಲಿ ಹುರುನ್, ಅದಾನಿ ಅವರ ಸಂಪತ್ತನ್ನು 44,000 ಕೋಟಿ ರೂ.ಗೆ ನಿಗದಿಪಡಿಸಿತ್ತು, ಅದು ಅವರನ್ನು ಹತ್ತನೇ ಶ್ರೀಮಂತ ಭಾರತೀಯನನ್ನಾಗಿ ಮಾಡಿತ್ತು.
ಹೆಚ್‌ಸಿಎಲ್‌ನ ಶಿವ ನಾಡರ್ ಮತ್ತು ಕುಟುಂಬವು 3.14 ಲಕ್ಷ ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಮೂರನೇ ಶ್ರೀಮಂತರಾಗಿದ್ದು, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಪೂನವಾಲಾ 2024 ರಲ್ಲಿ 2.89 ಲಕ್ಷ ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಸನ್ ಫಾರ್ಮಾಸ್ಯುಟಿಕಲ್ಸ್‌ನ ದಿಲೀಪ್ ಸಾಂಘ್ವಿ ಐದನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.
6ನೇ ಸ್ಥಾನದಲ್ಲಿ ಕುಮಾರ್ ಮಂಗಲಂ ಬಿರ್ಲಾ ಮತ್ತು ಕುಟುಂಬ, 7ನೇ ಸ್ಥಾನದಲ್ಲಿ ಗೋಪಿಚಂದ್ ಹಿಂದುಜಾ ಮತ್ತು ಕುಟುಂಬ,8 ನೇ ಸ್ಥಾನದಲ್ಲಿ ರಾಧಾಕಿಶನ್ ದಮಾನಿ( DMart) ಮತ್ತು ಕುಟುಂಬ, 9 ನೇ ಸ್ಥಾನದಲ್ಲಿಅಜೀಂ ಪ್ರೇಮ್‌ಜಿ ಮತ್ತು ಕುಟುಂಬ, 10 ನೇ ಸ್ಥಾನದಲ್ಲಿ ನೀರಜ್ ಬಜಾಜ್ ಮತ್ತು ಕುಟುಂಬ,11 ನೇ ಸ್ಥಾನದಲ್ಲಿ ಸುನೀಲ್ ಸುರೇಶ್ ಮತ್ತು ಕುಟುಂಬವಿದೆ.
ಜೊಹೊದ ರಾಧಾ ವೆಂಬು 47,500 ಕೋಟಿ ರೂ.ಗಳ ಸಂಪತ್ತನ್ನು ಹೊಂದಿರುವ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಜೆಪ್ಟೊದ ಸಹ-ಸಂಸ್ಥಾಪಕರಾದ ಕೈವಲ್ಯ ವೋಹ್ರಾ ಮತ್ತು ಆದಿತ್ ಪಲಿಚಾ ಅವರು 3,600 ರೂ. ಕೋಟಿ ಮತ್ತು 4,300 ಕೋಟಿ ರೂ ಸಂಪತ್ತು ಹೊಂದಿದ್ದಾರೆ.
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು 7,300 ಕೋಟಿ ರೂ.ಗಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.ಸಂಪತ್ತು ಅವರ ವ್ಯಾಪಾರ ಪಾಲುದಾರರಾದ ಜೂಹಿ ಚಾವ್ಲಾ ಅವರಿಗಿಂತ (4,600 ಕೋಟಿ ರೂ.) ಹೆಚ್ಚಿನದಾಗಿದೆ. ಮನರಂಜನಾ ಕ್ಷೇತ್ರದಲ್ಲಿ ಶಾರುಖ್ ದೇಶದ ಶ್ರೀಮಂತ ತಾರೆ ಎನಿಸಿಕೊಂಡಿದ್ದಾರೆ.
ಜೆಪ್ಟೋ ಆ್ಯಪ್ ಕೈವಲ್ಯ ಕಿರಿಯ ಶ್ರೀಮಂತ!
ಜೆಪ್ಟೊ ಆ್ಯಪ್ ಸಹ ಸಂಸ್ಥಾಪಕ ಕೈವಲ್ಯ ವೋಹ್ರಾ (21) ಬರೋಬ್ಬರಿ 3,600 ಕೋಟಿ ರೂ. ಮೌಲ್ಯದ ಸಂಪತ್ತಿ ನೊಂದಿಗೆ ದೇಶದ ಅತ್ಯಂತ ಕಿರಿಯ ವಯಸ್ಸಿನ ಶ್ರೀಮಂತ ಎನಿಸಿಕೊಂಡಿದ್ದಾರೆ. ಇದೇ ಆ್ಯಪ್‌ನ ಇನ್ನೊಬ್ಬ ಸಂಸ್ಥಾಪಕ ಆದಿತ್ ಪಲಿಚಾ (22) 4,300 ಕೋಟಿ ರೂ. ಸಂಪತ್ತಿ ನೊಂದಿಗೆ 2ನೇ ಕಿರಿಯ ಶ್ರೀಮಂತರಾಗಿದ್ದಾರೆ.
ಬಿಲಿಯನೇರ್‌ಗಳ ಸಂಖ್ಯೆ ಈಗ 334
ಭಾರತದಲ್ಲಿನ ಬಿಲಿಯನೇರ್‌ಗಳ ಸಂಖ್ಯೆ ಈ ಬಾರಿ ದಾಖಲೆಯ 334ಕ್ಕೇರಿದೆ. ಅಂದರೆ ಭಾರತದಲ್ಲಿ ಪ್ರತೀ 5 ದಿನಕ್ಕೆ ಒಬ್ಬ ಬಿಲಿಯನೇರ್ ಸೇರ್ಪಡೆಯಾಗಿದ್ದಾನೆ. 2023ರಲ್ಲಿ ಈ ಸಂಖ್ಯೆ 259 ಆಗಿತ್ತು. ಒಟ್ಟಾರೆ ಪಟ್ಟಿಯಲ್ಲಿ 1,539 ಶ್ರೀಮಂತರಿದ್ದಾರೆ. ಕನಿಷ್ಠ 1,000 ಕೋಟಿ ರೂ. ಸಂಪತ್ತು ಇದ್ದವರನ್ನು ಈ ಪಟ್ಟಿ ಯಲ್ಲಿ ಸೇರ್ಪಡೆ ಮಾಡಲಾಗಿದೆ.