ಹೊಸದಿಲ್ಲಿ: ಅಮೆರಿಕ ಮೂಲದ ಹಿಂಡ ನ್‌ಬರ್ಗ್ ಸಂಶೋಧನ ವರದಿಯು ಅದಾನಿ ಸಾಮ್ರಾಜ್ಯವನ್ನೇ ಅಲುಗಾಡಿಸಿದೆ. ಅದಾನಿ ಸಮೂಹ ಸಂಸ್ಥೆಯು ಮಾರುಕಟ್ಟೆ ತಿರುಚುವಿಕೆ ಮತ್ತು ವಂಚನೆಯಲ್ಲಿ ತೊಡಗಿದೆ ಎಂಬ ವರದಿಯ ಬೆನ್ನಲ್ಲೇ ಕುಸಿಯತೊಡಗಿದ ಕಂಪೆನಿಯ ಷೇರು ಗಳು ಶುಕ್ರವಾರ ಮತ್ತೆ ಮಹಾಪತನ ಕಂಡಿವೆ.
ಶುಕ್ರವಾರ ಅದಾ ನಿ ಸಮೂಹ ಕಂಪೆ ನಿಯ ಷೇರುಗಳ ಮೌಲ್ಯ ಶೇ.20 ರಷ್ಟು ಕುಸಿದಿದ್ದು, ಕಂಪೆನಿ ಒಟ್ಟಾರೆ ಮಾರುಕಟ್ಟೆ ಮೌಲ್ಯದಲ್ಲಿ 4.17 ಲಕ್ಷ ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದೆ. ಅದಾನಿ ಟೋಟಲ್ ಗ್ಯಾಸ್ ಷೇರುಗಳು ಶೇ.20, ಅದಾನಿ ಟ್ರಾನ್ಸ್‌ಮಿಶನ್ ಶೇ.19.9, ಗ್ರೀನ್ ಎನರ್ಜಿ ಶೇ.19.99, ಅದಾನಿ ಎಂಟರ್‌ಪ್ರೈಸಸ್ ಶೇ,.18.52, ಅದಾನಿ ಪೋರ್ಟ್ಸ್ ಶೇ.16.03, ಅದಾನಿ ವಿಲ್ಮಾರ್, ಅದಾನಿ ಪವರ್ ತಲಾ ಶೇ.5, ಅಂಬುಜಾ ಸಿಮೆಂಟ್ಸ್ ಶೇ.17.16, ಎಸಿಸಿ ಸಿಮೆಂಟ್ಸ್ ಶೇ.13.04ರಷ್ಟು ಕುಸಿದಿವೆ.
ಈ ಎಲ್ಲ ಬೆಳವಣಿಗೆಗಳ ನಡುವೆ, ಅದಾನಿ ಗ್ರೂಪ್‌ನ ಎಲ್ಲ ವ್ಯವಹಾರಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ನಿರ್ಧರಿಸಿದೆ. ಇದೇ ವೇಳೆ ಕಳೆದ ಎಪ್ರಿಲ್‌ನಲ್ಲಿ 100 ಶತಕೋಟಿ ಡಾಲರ್ ದಾಟಿದ್ದ ಅದಾನಿ ಸಂಪತ್ತು, ಎರಡೇ ದಿನಗಳಲ್ಲಿ ಶೇ.15ರಷ್ಟು ಇಳಿಕೆಯಾದಂತಾಗಿದೆ.
ಸೆನ್ಸೆಕ್ಸ್, ನಿಫ್ಟಿಯೂ ಪತನ: ಅದಾನಿ ಗ್ರೂಪ್ ಷೇರುಗಳು ಪತನಗೊಳ್ಳು ತ್ತಿದ್ದಂತೆ, ಆ ಕಂಪೆನಿಯೊಂದಿಗೆ ನಂಟು ಹೊಂದಿರುವ ಎಲ್ಲ ಬ್ಯಾಂಕಿಂಗ್, ಹಣಕಾಸು, ತೈಲ ಸಹಿತ ವಿವಿಧ ಕ್ಷೇತ್ರಗಳ ಷೇರುಗಳೂ ಕುಸಿತದ ಕಹಿ ಅನುಭವಿಸಿವೆ.
ಶುಕ್ರವಾರ ಮುಂಬಯಿಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ದಾರರು ಷೇರು ಖರೀದಿಯಲ್ಲಿ ಆಸಕ್ತಿ ವಹಿಸದ ಕಾರಣ, ಬಿಎಸ್‌ಇ ಸೆನ್ಸೆಕ್ಸ್ 874.16 ಅಂಕ ಕುಸಿದು, 59,330.90ಕ್ಕೆ ಅಂತ್ಯಗೊಂಡಿದೆ. ನಿಫ್ಟಿ 287.60 ಅಂಕ ಕುಸಿತ ದಾಖಲಿಸಿ, 3 ತಿಂಗಳಲ್ಲೇ ಕನಿಷ್ಠಕ್ಕೆ ಅಂದರೆ 17,604ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಪರಿ ಣಾಮ ಒಂದೇ ದಿನ ಹೂಡಿಕೆದಾರರ 10.73 ಲಕ್ಷ ಕೋಟಿ ರೂ.ಗಳ ಸಂಪತ್ತು ಕೊಚ್ಚಿಹೋಗಿದೆ.