ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ಅಮೆರಿಕ ಮೂಲದ ಹಿಂಡೆನ್ ಬರ್ಗ್ ರಿಸರ್ಚ್ ನ ಆರೋಪದ ಕುರಿತ ವಿಚಾರಣೆ ಸಂದರ್ಭದಲ್ಲಿ ಶುಕ್ರವಾರ (ಫೆ17) ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ನೀಡಿರುವ ಉತ್ತರವನ್ನು ಸ್ವೀಕರಿಸಲು ನಿರಾಕರಿಸಿದೆ.
ಇದನ್ನೂ ಓದಿ:ಹಿಂದೂ ಯುವತಿಯರೇ ಪರ್ಸ್ ನಲ್ಲಿ ಲಿಪ್‌ಸ್ಟಿಕ್ ಬದಲು ಚಾಕು ಇಟ್ಟುಕೊಳ್ಳಿ: ಸಾಧ್ವಿ ಪ್ರಾಚಿ
ಜತೆಗೆ ಹಿಂಡೆನ್ ಬರ್ಗ್ ರಿಸರ್ಚ್ ವರದಿ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ಪಾರದರ್ಶಕತೆಯನ್ನು ಪ್ರದರ್ಶಿಸಬೇಕು ಎಂದು ತಾಕೀತು ಮಾಡಿರುವ ಸುಪ್ರೀಂಕೋರ್ಟ್, ತಜ್ಞರ ಸಮಿತಿ ನೀಡಿರುವ ಸಲಹೆಗಳನ್ನು ಸ್ವೀಕರಿಸಲು ನಿರಾಕರಿಸಿರುವುದಾಗಿ ವರದಿಯಾಗಿದೆ.
ಅದಾನಿ ಗ್ರೂಪ್ ವಿರುದ್ಧ ಹಿಂಡೆನ್ ಬರ್ಗ್ ವರದಿ ಬಹಿರಂಗವಾದ ನಂತರ ಅದಾನಿ ಗ್ರೂಪ್ ಷೇರುಗಳು ಭಾರೀ ನಷ್ಟ ಕಂಡಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಹೂಡಿಕೆದಾರರ ಹಿತಾಸಕ್ತಿಗಳನ್ನು ಪ್ರಮುಖವಾಗಿ ಪರಿಗಣಿಸಿರುವುದಾಗಿ ಫೆಬ್ರುವರಿ 10ರಂದು ನಡೆದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.
ಹೂಡಿಕೆದಾರರ ಹಿತಾಸಕ್ತಿಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಜಸ್ಟೀಸ್ ಪಿಎಸ್ ನರಸಿಂಹ ಮತ್ತು ಜಸ್ಟೀಸ್ ಜೆಬಿ ಪಾರ್ಡಿವಾಲಾ ಅವರನ್ನೊಳಗೊಂಡ ಪೀಠವು, ಮುಚ್ಚಿದ ಲಕೋಟೆಯಲ್ಲಿ ಕೇಂದ್ರದ ಸಲಹೆ ಸ್ವೀಕರಿಸಲು ನಿರಾಕರಿಸಿರುವುದಾಗಿ ವರದಿ ತಿಳಿಸಿದೆ.
ವಿಚಾರಣೆ ವೇಳೆ, ನ್ಯಾಯಾಧೀಶರು ಸ್ವತಃ ಸಮಿತಿಯನ್ನು ರಚಿಸುತ್ತಾರೆ ಮತ್ತು ಕೇಂದ್ರದ ಯಾವುದೇ ಹಸ್ತಕ್ಷೇಪ ಇಲ್ಲದೇ ಸಮಿತಿಯನ್ನು ರಚಿಸುತ್ತದೆ ಎಂದು ಸುಪ್ರೀಂ ಪೀಠ ತಿಳಿಸಿದೆ. ಈ ಪ್ರಕರಣದಲ್ಲಿ ಕೇಂದ್ರ ಅಥವಾ ಅರ್ಜಿದಾರರ ಯಾವುದೇ ಸಲಹೆಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಿದೆ.