ನವದೆಹಲಿ: ದೇಶದ ಪ್ರಮುಖ ಸಿಮೆಂಟ್ ತಯಾರಿಕಾ ಕಂಪನಿಯಾದ “ಸಂಘಿ ಇಂಡಸ್ಟ್ರೀಸ್” ಈಗ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ನ ಅಂಬುಜಾ ಸಿಮೆಂಟ್ ತೆಕ್ಕೆಗೆ ಬಂದಿದ್ದು, ಬರೋಬ್ಬರಿ 5,000 ಸಾವಿರ ಕೋಟಿ ರೂಪಾಯಿಗೆ ಸಂಘಿ ಇಂಡಸ್ಟ್ರೀಸ್ ಅನ್ನು ತಮ್ಮ ಸುಪರ್ದಿಗೆ ಪಡೆದಿರುವುದಾಗಿ ಕಂಪನಿ ಗುರುವಾರ (ಆ.03) ತಿಳಿಸಿದೆ.
ಇದನ್ನೂ ಓದಿ:Gadar 2 vs OMG 2: ಒಂದೇ ದಿನ 2 ಸಿನಿಮಾ ರಿಲೀಸ್;ಅಡ್ವಾನ್ಸ್ ಬುಕಿಂಗ್‌ನಲ್ಲಿ ಯಾರು ಮುಂದೆ?
ಗುಜರಾತ್ ಮೂಲದ ಸಂಘಿ ಇಂಡಸ್ಟ್ರೀಸ್ ಖರೀದಿ ಪ್ರಕ್ರಿಯೆಯ ನಂತರ ಈ ಕುರಿತು ಮಾಹಿತಿ ನೀಡಿರುವ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, 2028ರ ಹೊತ್ತಿಗೆ ಅಂಬುಜಾ ಸಿಮೆಂಟ್ ತಯಾರಿಕೆಯ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ಭಾರತದ ಅತ್ಯಂತ ವಿಶ್ವಾಸಾರ್ಹ ಹಾಗೂ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲ್ಪಡುತ್ತಿದ್ದ ಸಂಘಿ ಇಂಡಸ್ಟ್ರೀಸ್ ಇದೀಗ ಅದಾನಿ ಗ್ರೂಪ್ ಗೆ ಸೇರ್ಪಡೆಯಾಗಿದೆ. ಇನ್ಮುಂದೆ ಸಂಘಿಪುರಂ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ಅಂಬುಜಾ ಸಿಮೆಂಟ್ ಕಂಪನಿ ದ್ವಿಗುಣಗೊಳಿಸಲಿದೆ ಎಂದು ಅದಾನಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸಂಘಿ ಇಂಡಸ್ಟ್ರೀಸ್ ಖರೀದಿಯ ಹಣಕಾಸು ಪಾವತಿಯು ಕಂಪನಿಯ ಆಂತರಿಕ ಪ್ರಕ್ರಿಯೆಯಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಅಂಬುಜಾ ಸಿಮೆಂಟ್ ಪ್ರಕಟನೆಯಲ್ಲಿ ತಿಳಿಸಿದೆ. ಸಂಘಿ ಇಂಡಸ್ಟ್ರೀಸ್ ಲಿಮಿಟೆಡ್ ವಾರ್ಷಿಕ 6.6 ಮಿಲಿಯನ್ ಟನ್ ಗಳಷ್ಟು ಸಿಮೆಂಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಇದೀಗ ಸಂಘಿ ಇಂಡಸ್ಟ್ರೀಸ್ ಖರೀದಿಯ ನಂತರ ಅಂಬುಜಾ ಸಿಮೆಂಟ್ ವಾರ್ಷಿಕ ಉತ್ಪಾದನಾ ಸಾಮರ್ಥ್ಯ 73.6 ಮಿಲಿಯನ್ ಟನ್ ಗಳಿಗೆ ಏರಿಕೆಯಾಗಲಿದೆ ಎಂದು ತಿಳಿಸಿದೆ.