ಷೇರು ಪೇಟೆಗಳಲ್ಲಿ ಮತ್ತು ಟ್ರೇಡಿಂಗ್‌ಗಳಲ್ಲಿ ಅದಾನಿ ಗ್ರೂಪ್ ಅವ್ಯವಹಾರ ನಡೆಸಿದೆ ಎಂದು ಅಮೆರಿಕದ ಸಂಶೋಧನ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ನೀಡಿದ್ದ ವರದಿಯಿಂದಾಗಿ ಗುರುವಾರದವರೆಗೂ ಬಾಂಬೆ ಷೇರು ಪೇಟೆಯಲ್ಲಿ ತಲ್ಲಣಗಳನ್ನು ಸೃಷ್ಟಿಸಿದೆ. ಹೂಡಿಕೆದಾರರಿಗೆ ಹಾಗೂ ಅದಾನಿ ಗ್ರೂಪ್‌ಗೆ ಸರಿ ಸುಮಾರು 10.5 ಲಕ್ಷ ಕೋಟಿ ರೂ. ನಷ್ಟವಾಗಿದೆ. ಸದ್ಯ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ಎಲ್ಲ ಹಂತದಲ್ಲಿಯೂ ಕೂಡ ಅದಾನಿ ಗ್ರೂಪ್‌ಗೆ ಮನ್ನಣೆಯ ಮಣೆ ನೀಡುತ್ತಿದೆ ಎಂಬ ಆರೋಪಗಳ ನಡುವೆ ಹಿಂಡನ್‌ಬರ್ಗ್ ರಿಸರ್ಚ್‌ನ ವರದಿ ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿರುವವರಿಗೆ ಭಾರೀ ಆಘಾತವನ್ನೇ ಕೊಟ್ಟಿದೆ.
ಈ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಂ. ಸಪ್ರ ನೇತೃತ್ವದ ಸಮಿತಿ ರಚಿಸಲು ಆದೇಶ ನೀಡಿದೆ. ಹೂಡಿಕೆದಾರರ ಹಿತದೃಷ್ಟಿಯಿಂದ ನೋಡುವುದಿದ್ದರೆ, ಮುಖ್ಯ ನ್ಯಾಯಮೂರ್ತಿ ಡಿ .ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ನೀಡಿದ ಆದೇಶ ಸ್ತುತ್ಯಾರ್ಹವೆಂದೇ ಹೇಳಬೇಕಾಗುತ್ತದೆ. ಸಮಿತಿಯಲ್ಲಿ ಷೇರು ಪೇಟೆಯ ನಿಯಮಗಳಲ್ಲಿ ಪರಿಣತ ಮತ್ತು ನ್ಯಾಯವಾದಿ ಸೋಮಶೇಖರನ್ ಸುಂದರೇಶನ್, ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಯುಐಡಿಎಐ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ, ಎನ್‌ಬಿಎಫ್ಐಬಿಯ ಅಧ್ಯಕ್ಷ ಕೆ.ವಿ.ಕಾಮತ್, ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜೆ.ಪಿ.ದೇವಧರ್, ಎಸ್‌ಬಿಐ ಮಾಜಿ ಅಧ್ಯಕ್ಷ ಒ.ಪಿ. ಭಟ್ ಇದ್ದಾರೆ.
ಈ ಹಿನ್ನೆಲೆಯಲ್ಲಿ ಹೂಡಿಕೆದಾರರಿಗೆ ಆರೋಪ ಗಳ ಪ್ರಕಾರ ನಿಜವಾಗಿಯೂ ನಷ್ಟವಾಗಿದೆಯೇ, ಹಿಂಡನ್‌ಬರ್ಗ್ ರಿಸರ್ಚ್ ಪ್ರಕಾರ ಅದಾನಿ ಗ್ರೂಪ್ ವಂಚನೆ ಎಸಗಿದೆಯೇ ಹಾಗೂ ಸದರಿ ಪ್ರಕರಣ ಅಲ್ಲದೇ ಇದ್ದರೂ ಷೇರುಪೇಟೆಯಲ್ಲಿ ಮತ್ತು ಟ್ರೇಡಿಂಗ್ ವಲಯದಲ್ಲಿ ಹೂಡಿಕೆದಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಇರುವ ನಿಯಮಗಳನ್ನು ಬಲಪಡಿಸಲು ಈ ಸಮಿತಿ ಪರಿಶೀಲನೆ ನಡೆಸಲಿದೆ. ಅದಾನಿ ಗ್ರೂಪ್ ಹೇಳಿಕೊಂಡಿರುವ ಪ್ರಕಾರ ಹೂಡಿಕೆದಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ನಷ್ಟ ಉಂಟಾಗಿಲ್ಲ ಎಂದು ಪ್ರತಿಪಾದಿಸುತ್ತಾ ಬಂದಿದೆ. ಆದರೆ ನಡೆಯುತ್ತಿರುವ ಬೆಳವಣಿಗೆಗಳು ಮೇಲ್ನೋಟಕ್ಕೆ ಅದಕ್ಕೆ ಪ್ರತಿಕೂಲವಾಗಿಯೇ ಇದೆ ಎನ್ನುವುದು ತಜ್ಞರ ಅಭಿಪ್ರಾಯ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ವರದಿಯ ಬಳಿಕ ಮಾರುಕಟ್ಟೆಯ ಮೇಲೆ ಬೀರಿರುವ ಪರಿಸ್ಥಿತಿಯ ಒಟ್ಟಾರೆ ಅಂಶ, ಹೂಡಿಕೆದಾರರ ಹಿತರಕ್ಷಣೆಗೆ ಬೇಕಾಗಿರುವ ಕ್ರಮಗಳು, ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ತನಿಖೆಗಳ ಬಗ್ಗೆ ಒಟ್ಟು ಎರಡು ತಿಂಗಳ ಅವಧಿಯಲ್ಲಿ ಆಮೂಲಾಗ್ರವಾಗಿ ತನಿಖೆ ನಡೆಸಿ ಮೊಹರು ಮಾಡಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಇದಲ್ಲದೆ, ಸೆಬಿ ಸದ್ಯ ಕೈಗೊಂಡಿರುವ ತನಿಖೆಯೂ ಕೂಡ ಇದೇ ಅವಧಿಯಲ್ಲಿ ಮುಕ್ತಾಯವಾಗಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಒಟ್ಟಾರೆಯಾಗಿ ಹೇಳುವುದಿದ್ದರೆ, ಷೇರು ಪೇಟೆಯಲ್ಲಿ ಹೂಡಿಕೆದಾರರ ಹಿತಾಸಕ್ತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎನ್ನುವುದು ನಿರ್ವಿವಾದ. ಅದಾನಿ ಗ್ರೂಪ್ ವಿರುದ್ಧದ ತನಿಖೆಗಾಗಿ ಕೇಂದ್ರವೇ ಸಮಿತಿ ರಚನೆಯ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್ ಕೆಲವು ದಿನಗಳ ಹಿಂದೆ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಸುಪ್ರೀಂ ಕೋರ್ಟ್ ತೆಗೆದುಕೊಂಡ ನಿರ್ಧಾರ ಪ್ರಶಂಸಾರ್ಹವೇ ಆಗಿದೆ. ನ್ಯಾಯಪೀಠದ ಆದೇಶದ ಬಳಿಕ ಬಿಎಸ್‌ಇನಲ್ಲಿ ಅದಾನಿ ಗ್ರೂಪ್‌ಗೆ 1 ಲಕ್ಷ ಕೋಟಿ ರೂ. ಲಾಭವಾಗಿದೆ. ಅದೇನೇ ಇದ್ದರೂ, ಹೂಡಿಕೆದಾರರ ಶ್ರಮದ ಗಳಿಕೆ ಪೋಲಾಗುವುದು ನಿಲ್ಲಲೇಬೇಕು.