ನವದೆಹಲಿ: ವಿದ್ಯುತ್, ಕಲ್ಲಿದ್ದಲು, ನೈಸರ್ಗಿಕ ಅನಿಲ, ಬಂದರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಛಾಯೆ ಮೂಡಿಸಿರುವ ಅದಾನಿ ಗ್ರೂಪ್ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಈ ಮೂಲಕ ರಿಲಯನ್ಸ್ ಜಿಯೋ, ಏರ್‌ಟೆಲ್‌ಗೆ ಸವಾಲು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜು.26ರಂದು ತರಂಗಗುತ್ಛಗಳ ಹರಾಜು ನಡೆಯಲಿದ್ದು, ಶುಕ್ರವಾರವೇ (ಜು.8) ಅರ್ಜಿ ಸಲ್ಲಿಸುವ ದಿನ ಮುಕ್ತಾಯವಾಗಿದೆ.
ಜಿಯೋ, ಏರ್‌ಟೆಲ್ ಮತ್ತು ವೊಡಫೋನ್ ಐಡಿಯಾ ಖಾಸಗಿ ದೂರಸಂಪರ್ಕ ವಲಯದಿಂದ ಅರ್ಜಿ ಸಲ್ಲಿಸಿರುವ ಪ್ರಮುಖ ಮೂರು ಕಂಪನಿಗಳು ಎಂದು ಮೂಲಗಳನ್ನು ಉಲ್ಲೇಖೀಸಿ “ಎನ್‌ಡಿಟಿವಿ’ ವರದಿ ಮಾಡಿದೆ. ನಾಲ್ಕನೇ ಅರ್ಜಿದಾರ ಕಂಪನಿಯೇ ಅದಾನಿ ಗ್ರೂಪ್.
ಇದನ್ನೂ ಓದಿ :ಗೊಟಬಯಾ ಪರಾರಿ: ಶ್ರೀಲಂಕಾದಲ್ಲಿ ಅರಾಜಕತೆ ಹೇಗಿದೆ ಎಂಬುದಕ್ಕೆ ಈ ವೈರಲ್ ವಿಡಿಯೋಗಳೇ ಸಾಕ್ಷಿ!
ಇತ್ತೀಚೆಗಷ್ಟೇ ಅದಾನಿ ಗ್ರೂಪ್ ನ್ಯಾಷನಲ್ ಲಾಂಗ್ ಡಿಸ್ಟೆನ್ಸ್ ಮತ್ತು ಇಂಟರ್‌ನ್ಯಾಷನಲ್ ಲಾಂಗ್ ಡಿಸ್ಟೆನ್ಸ್ ಪರವಾನಗಿ ಅದರೆ, ದೇಶವ್ಯಾಪಿಯಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೂರಸಂಪರ್ಕ, ಇಂಟರ್‌ನೆಟ್ ಮತ್ತು ಸಹವರ್ತಿ ಸೇವೆಗಳನ್ನು ನೀಡುವುದಕ್ಕೆ ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆದುಕೊಂಡಿತ್ತು.
ಜು.26ರಂದು 4.3 ಲಕ್ಷ ಕೋಟಿ ರೂ. ಮೌಲ್ಯದ 72,097.85 ಮೆಗಾಹರ್ಟ್ಸ್ 5ಜಿ ತರಂಗಗುತ್ಛಗಳನ್ನು ಹರಾಜು ಹಾಕಲಾಗುತ್ತದೆ. ಕುತೂಹಲಕಾರಿ ಅಂಶವೆಂದರೆ ರಿಲಯನ್ಸ್ ಮತ್ತು ಅದಾನಿ ಗ್ರೂಪ್‌ನ ಮಾಲೀಕರು ಗುಜರಾತ್ ಮೂಲದವರೇ ಆಗಿದ್ದಾರೆ ಎನ್ನುವುದು ಗಮನಾರ್ಹ.