ಹೊಸದಿಲ್ಲಿ: ಹಿಂಡೆನ್‌ಬರ್ಗ್ ರಿಸರ್ಚ್‌ನ (Hindenburg Research) ಇತ್ತೀಚಿನ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಅದಾನಿ ಗ್ರೂಪ್ (Adani group) ಭಾನುವಾರ ಯುಎಸ್ ಶಾರ್ಟ್ ಸೆಲ್ಲರ್ ಸಂಸ್ಥೆಯ ವರದಿಗಳನ್ನು ನಿರಾಕರಿಸಿದೆ.
ಅದಾನಿ ಸಮೂಹದ ಷೇರು ಅಕ್ರಮಕ್ಕೆ ಸಂಬಂಧಿಸಿದ ಸಾಗರೋತ್ತರ ಕಂಪೆನಿಗಳಲ್ಲಿ ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಹಾಗೂ ಅವರ ಪತಿ ಪಾಲು ಹೊಂದಿದ್ದಾರೆ ಎಂಬ ಮಾಹಿತಿಯನ್ನು ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ಬಹಿರಂಗಪಡಿಸಿದೆ.
ಶನಿವಾರ ರಾತ್ರಿ ಈ ಕುರಿತು 106 ಪುಟಗಳ ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿಯ ಬೇನಾಮಿ ಕಂಪೆನಿಗಳಲ್ಲಿ ತಾವೇ ಷೇರುಗಳನ್ನು ಹೊಂದಿರುವ ಕಾರಣಕ್ಕೆ ಸೆಬಿ ಮುಖ್ಯಸ್ಥೆಯಾಗಿರುವ ಮಾಧವಿ ಬುಚ್, ಅದಾನಿ ಗ್ರೂಪ್ ವಿರುದ್ಧದ ಷೇರು ಅವ್ಯವಹಾರ ಕುರಿತು ಸರಿಯಾಗಿ ತನಿಖೆ ಮಾಡಿಲ್ಲ ಎಂದು ಆಪಾದಿಸಿದೆ.
ಹಿಂಡನ್‌ಬರ್ಗ್ ವರದಿಯ ಪ್ರಕಾರ, ಮಾಧವಿ ಬುಚ್ ಮತ್ತು ಅವರ ಪತಿ ಬರ್ಮುಡಾ ಮತ್ತು ಮಾರಿಷಸ್‌ನಲ್ಲಿರುವ ನಕಲಿ ಕಂಪೆನಿಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದಾರೆ.
ಇದೀಗ ಅದಾನಿ ಸಮೂಹವು ಕಂಪನಿಯ ವಿರುದ್ಧದ ಈ ಆರೋಪಗಳನ್ನು ತಿರಸ್ಕರಿಸಿದೆ. ಅದರ ಸಾಗರೋತ್ತರ ಹೋಲ್ಡಿಂಗ್ ರಚನೆಯು ಸಂಪೂರ್ಣವಾಗಿ ಪಾರದರ್ಶಕವಾಗಿದೆ ಎಂದು ಪುನರುಚ್ಚರಿಸಿದೆ. ಎಲ್ಲಾ ಸಂಬಂಧಿತ ವಿವರಗಳನ್ನು ನಿಯಮಿತವಾಗಿ ಸಾರ್ವಜನಿಕ ದಾಖಲೆಗಳಲ್ಲಿ ಬಹಿರಂಗಪಡಿಸಲಾಗುತ್ತದೆ ಎಂದಿದೆ.