ಉಡುಪಿ: ಎಲ್ಲೂರಿನಲ್ಲಿರುವ ಅದಾನಿ ಪವರ್ ಲಿ. ಉಡುಪಿ ಟಿಪಿಪಿಯ ಅದಾನಿ ಫೌಂಡೇಷನ್‌ಎಲ್ಲೂರು ಗ್ರಾ. ಪಂ. ವ್ಯಾಪ್ತಿಯ 17 ಲಕ್ಷ ರೂ. ವೆಚ್ಚದ 4 ರಸ್ತೆಗಳ ಅಭಿವದ್ಧಿಗೆ ಮುಂದಾಗಿದೆ.
ಅದಾನಿ ಸಮೂಹದ ಕಾರ್ಯ ನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಆಳ್ವ ಹಾಗೂ ಎಲ್ಲೂರು ಗ್ರಾ.ಪಂ. ಅಧ್ಯಕ್ಷ ರವಿರಾಜ್ ರಾವ್ ಜಂಟಿಯಾಗಿ ಭೂಮಿ ಪೂಜೆ ನೆರವೇರಿಸಿದರು.
ಅದಾನಿ ಸಮೂಹವು ಸ್ಥಾವರದ ಸುತ್ತ¤ಲಿನ 7 ಗ್ರಾ.ಪಂ. ಗಳ ಮೂಲ ಸೌಕರ್ಯ ಅಭಿವೃದ್ಧಿಗೆ 22.73 ಕೋಟಿ ರೂ. ಅನುದಾನವನ್ನು ಸಿಎಸ್‌ಆರ್ ಯೋಜನೆಯಲ್ಲಿ ಘೋಷಿಸಿದ್ದು, ಆಯಾ ಗ್ರಾ.ಪಂ.ಗಳ ವಾರ್ಷಿಕ ಕ್ರಿಯಾಯೋಜನೆ ಪ್ರಕಾರ ಅನುಷ್ಠಾನಿಸಲಾಗುತ್ತಿದೆ. ಈವರೆಗೆ ಸುಮಾರು 13 ಕೋಟಿ ರೂ. ವೆಚ್ಚದ ಸೌಕರ್ಯ ಕಲ್ಪಿಸಲಾಗಿದೆ ಎಂದು ಕಿಶೋರ್ ಆಳ್ವ ಹೇಳಿದರು.
ಅದಾನಿ ಸಮೂಹವು ಎಲ್ಲೂರು ಗ್ರಾ. ಪಂ. ವ್ಯಾಪ್ತಿಯ 78 ಮೀ. ಉದ್ದದ ಮಾಣಿಯೂರು ಮಠ ರಸ್ತೆ, 78 ಮೀ. ಕೃಷ್ಣ ನರ್ಸರಿ ರಸ್ತೆ, 100 ಮೀ. ಪಿಲಿಚಂಡಿ ರಸ್ತೆ, 95 ಮೀ. ಉಳ್ಳೂರು ರಸ್ತೆಗಳ ಕಾಂಕ್ರಿಟೀಕರಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದು ರವಿರಾಜ್ ರಾವ್ ಹೇಳಿದರು.
ಗ್ರಾ.ಪಂ. ಉಪಾಧ್ಯಕ್ಷೆ ಉಷಾ ಪೂಜಾರ್ತಿ, ಸದಸ್ಯರಾದ ಹರೀಶ್ ಕುಲಾಲ್, ದಯಾನಂದ ಶೆಟ್ಟಿಗಾರ್, ಶೋಭಾ ಶೆಟ್ಟಿ, ಸಂತೋಷ ಶೆಟ್ಟಿ ಅದಮಾರು, ಮಾಜಿ ಅಧ್ಯಕ್ಷೆ ವಸಂತಿ ಮಧ್ವರಾಜ್, ಯುಪಿಸಿಎಲ್ ನ ಎಜಿಎಂ ರವಿ ಆರ್. ಜೇರೆ ಹಾಗೂ ಫೌಂಡೇಶನ್‌ನ ಅನುದೀಪ್ ಉಪಸ್ಥಿತರಿದ್ದರು.