Advertisement
ಒಂದು ವೇಳೆ ಈ ಹಗರಣ ಮತ್ತೆ ಜೀವ ಪಡೆದುಕೊಂಡರೆ ಗಣಿಧಣಿಗಳಾದ ಗಾಲಿ ಜನಾರ್ದನ ರೆಡ್ಡಿ, ಆನಂದ್ ಸಿಂಗ್ ಜತೆಗೆ, ಕೇಂದ್ರದ ಬಿಜೆಪಿ ನಾಯಕರ ಜತೆಗೆ ಉತ್ತಮ ಸಂಬಂಧ ಇರಿಸಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿರುವ ಉದ್ಯಮಿ ಅದಾನಿ ಅವರಿಗೆ ಸಂಕಷ್ಟದ ಕಾಲ ಎದುರಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಬೇಲೆಕೇರಿ ಅದಿರು ನಾಪತ್ತೆ ಹಾಗೂ ನವ ಮಂಗಳೂರು ಬಂದರಿನಿಂದ ಅಕ್ರಮವಾಗಿ ಅದಿರು ಸಾಗಿಸಿರುವ ಪ್ರಕರಣ ಕುರಿತಂತೆ ಸಿಬಿಐ ಸಾಕ್ಷ್ಯಾಧಾರದ ಕೊರತೆಯಿಂದ ತನಿಖೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಅಧಿಕೃತವಾಗಿಯೇ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಹಾಗೂ ಹಗರಣದ ಕುರಿತಂತೆ ರಚನೆ ಯಾಗಿರುವ ಸಂಪುಟ ಉಪ ಸಮಿತಿ ಅಧ್ಯಕ್ಷರೂ ಆಗಿರುವ ಎಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಿಬಿಐನ ಮುಕ್ತಾಯ ವರದಿ ಹಿಂದೆ ರಾಜಕೀಯ ಷಡ್ಯಂತ್ರವಿದ್ದು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ ಇದನ್ನು ರಾಜ್ಯ ಸರ್ಕಾರವೇ ಎಸ್‌ಐಟಿ ನೇಮಕ ಮಾಡಿ ತನಿಖೆ ನಡೆಸಲಿದೆ ಎಂದು ಹೇಳಿದರು.
ಕಬ್ಬಿಣದ ಅದಿರು ಅಕ್ರಮವಾಗಿ ವಿದೇಶಗಳಿಗೆ ಸಾಗಾಟ ಮಾಡಲಾಗಿದೆ ಎಂದು ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಮ್ಮ ವರದಿಯಲ್ಲಿ ಹೇಳಿದ್ದರು. ಅವರ ವರದಿ ಆಧರಿಸಿ ಸುಪ್ರೀಂಕೋರ್ಟ್ ಸಿಇಸಿ ಮೂಲಕ ವರದಿ ಪಡೆದು, ಸಿಇಸಿ ವರದಿ ಆಧರಿಸಿ 50 ಸಾವಿರ ಮೆಟ್ರಿಕ್ ಟನ್‌ಗಿಂತ ಹೆಚ್ಚಿನ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿರುವ ಬೇಲೆಕೇರಿ ಹಾಗೂ ನವ ಮಂಗಳೂರು ಬಂದರಿನಿಂದ ಸಾಗಣೆಯಾದ ಪ್ರಕರಣಗಳನ್ನು ತನಿಖೆ ಮಾಡುವಂತೆ 2013 ರಲ್ಲಿ ಆದೇಶ ಹೊರಡಿಸಿತ್ತು. 50 ಸಾವಿರ
ಮೆಟ್ರಿಕ್ ಟನ್‌ಗಿಂತ ಕಡಿಮೆ ಅಕ್ರಮ ಸಾಗಾಟ ಮಾಡಿರುವ ಪ್ರಕರಣಗಳನ್ನು ರಾಜ್ಯ ಸರ್ಕಾರ ಎಸ್‌ಐಟಿ ಮೂಲಕ ತನಿಖೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸಿಬಿಐ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಶಾಸಕರಾದ ಆನಂದ ಸಿಂಗ್, ನಾಗೇಂದ್ರ ಬಾಬು, ಸುರೇಶ್ ಬಾಬು, ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಸೇರಿದಂತೆ 26 ಜನರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು. ಹಾಗೂ ಅದಾನಿ ಕಂಪನಿ ವಿರುದ್ದವೂ ಅಕ್ರಮ ಅದಿರು ಸಾಗಣೆ ವಿರುದ್ದ ಪ್ರಕರಣ ದಾಖಲಿಸಲಾಯಿತು. ಅಲ್ಲದೇ ಜನಾರ್ದನ ರೆಡ್ಡಿ ಸೇರಿದಂತೆ 26 ಜನರನ್ನು ಬಂಧಿಸಿ ವಿಚಾರಣೆ ಸಹ ನಡೆಸಿದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮೂರು ವರ್ಷಗಳ ಕಾಲ ಜೈಲು ವಾಸ ಕೂಡ ಅನುಭವಿಸಿ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ.
Related Articles
ಇದು 35 ಸಾವಿರ ಕೋಟಿ ರೂ.ಗಳ ಹಗರಣವಾಗಿದ್ದು, ಸಾಕ್ಷ್ಯಾ ಧಾರಗಳ ಕೊರತೆ ಕಾರಣದಿಂದಾಗಿ ಸಿಬಿಐ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಆದರೆ ಈ ಮುಕ್ತಾಯ ವರದಿ ಹಿಂದೆ ಬಿಜೆಪಿ ನಾಯಕರೇ ಇದ್ದಾರೆ ಎಂಬುದು ಮಾಜಿ ಸಿಎಂ
ಎಚ್.ಡಿ.ಕುಮಾರಸ್ವಾಮಿ ಅವರ ಆರೋಪ. ಬಿಜೆಪಿ ನಾಯಕರೇ 2018ರ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಜನಾರ್ದನ ರೆಡ್ಡಿಯಿಂದ 500 ಕೋಟಿ ರೂ. ಪಡೆದು ಈ ಪ್ರಕರಣ ಮುಚ್ಚಿ ಹಾಕಿದ್ದಾರೆ ಎಂದು ಆಪಾದಿಸಿದ್ದರು.
Advertisement
ನವ ಮಂಗಳೂರು ಬಂದರಿನಿಂದ 2.85 ಕೋಟಿ ಮೆಟ್ರಿಕ್ ಟ್ರನ್ ಅದಿರು ಅಕ್ರಮವಾಗಿ ಸಾಗಿಸಲಾಗಿದ್ದು, ಈ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಸಿಬಿಐ ತನಿಖೆಯನ್ನು ಪ್ರಾಥಮಿಕ ಹಂತದಲ್ಲಿಯೇ ಕೈ ಬಿಡಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.●ಎಚ್.ಕೆ. ಪಾಟೀಲ್, ಸಂಪುಟ ಉಪ ಸಮಿತಿ ಅಧ್ಯಕ್ಷ ವಿಐಪಿಗಳು ನಿರಪರಾಧಿಗಳು ಎಂದು ಬಿಂಬಿತವಾಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಮೇಲ್ಮನವಿ ಸಲ್ಲಿಸುವಲ್ಲಿ ಆಗಿರುವ ವಿಳಂಬ. ಎಸ್‌ಐಟಿ 3 ವರ್ಷಗಳ ಕಾಲ ಶ್ರಮ ಪಟ್ಟು ವರದಿ ತಯಾರಿಸಿತು. ಆದರೆ ಸಿಬಿಐಬಿ ರಿಪೋರ್ಟ್ ಸಲ್ಲಿಸಿದೆ.
●ನ್ಯಾ. ಸಂತೋಷ್ ಹೆಗ್ಡೆ, ಮಾಜಿ ಲೋಕಾಯುಕ್ತ