ಚಿತ್ರಕ್ಕೆ ಶೀರ್ಷಿಕೆ ಮುಖ್ಯವೋ, ಕಥೆ ಮುಖ್ಯವೋ ಅಥವಾ ಕಲಾವಿದರು ಮುಖ್ಯವೋ..? ಇವೆಲ್ಲವೂ ಮುಖ್ಯವೇ. ಆದರೆ, ಚಿತ್ರದ ಕಥೆಗಿಂತ ಮೊದಲು ಗೊತ್ತಾಗೋದೇ ಆ ಚಿತ್ರದ ಶೀರ್ಷಿಕೆ. ಹಾಗಾಗಿ, ಒಂದು ಚಿತ್ರಕ್ಕೆ ಮೊದಲು ಶೀರ್ಷಿಕೆ ಎಂಬುದು ಬಹಳ ಮುಖ್ಯ. ಆಮೇಲೆ ಉಳಿದದ್ದು. ಒಂದು ಶೀರ್ಷಿಕೆ ಕೇಳಿದಾಕ್ಷಣ, ಎಲ್ಲೋ ಒಂದು ಕಡೆ ಮತ್ತೆ ಕೇಳುವಂತಿರಬೇಕು, ಇಲ್ಲವೇ, ಚಿತ್ರದೊಳಗೇನೋ ಇದೆ ಎಂಬ ಯೋಚನೆ ಮೂಡಬೇಕು.
ಅಂತಹ ಅದೆಷ್ಟೋ ಆಕರ್ಷಣೆ ಇರುವ ಶೀರ್ಷಿಕೆ ಹೊತ್ತ ಚಿತ್ರಗಳು ಈಗಾಗಲೇ ಬಂದು ಹೋಗಿವೆ. ಆ ಸಾಲಿಗೆ ಈಗ “ಅದನೇನ್ ಕೇಳ್ತಿ’ ಚಿತ್ರ ಹೊಸ ಸೇರ್ಪಡೆ. ಈಗ ಆಡು ಭಾಷೆಯ ಪದಗಳೇ ಚಿತ್ರದ ಶೀರ್ಷಿಕೆಗಳಾಗುತ್ತಿವೆ. “ಅದನೇನ್ ಕೇಳ್ತಿ’ ಚಿತ್ರ ಕೂಡ ಅಂಥದ್ದೇ ಆಡುಭಾಷೆ ಶೀರ್ಷಿಕೆಯಡಿ ಮೂಡಿಬಂದಿರುವ ಚಿತ್ರ. ಅಂದಹಾಗೆ, ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಸೆನ್ಸಾರ್‌ಗೆ ಹೋಗಿದೆ.
ಚಿತ್ರಕ್ಕೆ ನಾಗೇಂದ್ರ ಅರಸ್ ನಿರ್ದೇಶಕರು. ಎಂದಿನಂತೆ ಇಲ್ಲೂ ಚಿತ್ರಕಥೆ, ಸಂಕಲವಿದೆ. ಅದರ ಜೊತೆಗೆ ಮೊದಲ ಬಾರಿಗೆ ಅವರು ಸಂಭಾಷಣೆ ಬರೆದಿದ್ದಾರೆ. ಇದೊಂದು ಹಾಸ್ಯ ಪ್ರಧಾನ ಕಥೆ. ಕೇವಲ ಎರಡು ದಿನದಲ್ಲಿ ನಡೆಯುವ ಕತೆಯಾಗಿದ್ದು, ಮೂವರು ಯುವಕರು ನಿರುದ್ಯೋಗದ ಸಮಸ್ಯೆಯಿಂದ ಬೇಸರಗೊಂಡು, ತಿಳಿದರೂ, ಆತುರದ ತಪ್ಪು ನಿರ್ಧಾರಕ್ಕೆ ಮುಂದಾಗುತ್ತಾರೆ.
ಅದು ಯಾವ ನಿರ್ಧಾರ, ಆ ನಿರ್ಧಾರದಿಂದ ಏನೆಲ್ಲಾ ಆಗುತ್ತೆ ಎಂಬುದು ಕಥೆ’ ಎಂಬುದು ನಿರ್ದೇಶಕರ ಮಾತು. ಈ ಚಿತ್ರದಲ್ಲಿ ಒಂದಷ್ಟು ವಿಶೇಷತೆಗಳಿವೆ. ಒಂದಷ್ಟು ದೃಶ್ಯಗಳನ್ನು ಒಂದೇ ಶಾಟ್‌ನಲ್ಲಿ ಸೆರೆಹಿಡಿಯಲಾಗಿದೆ. ಆ ದೃಶ್ಯಗಳು ಏಳು, ಹದಿನಾಲ್ಕು ನಿಮಿಷದ್ದು ಎಂಬುದು ವಿಶೇಷ. ಬಹುತೇಕ ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರೀಕರಣಕ್ಕೂ ಮುನ್ನ, ಕಲಾವಿದರು, ತಂತ್ರಜ್ಞರು ವರ್ಕ್‌ಶಾಪ್ ನಡೆಸಿ, ನಂತರ ಭಾಗವಹಿಸಿದ್ದಾರೆ.
ಮೊದಲು ನಿರ್ದೇಶಕರ ಕಥೆ ಕೇಳಿದ ಮೂವರು ಛಾಯಾಗ್ರಾಹಕರು, ಕೆಲಸ ಮಾಡಲು ಯೋಚಿಸಿದ್ದಾರೆ. ಕೊನೆಗೆ ಎಂಬಿ.ಅಳ್ಳಿಕಟ್ಟಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಸೇನಾಪತಿ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಇನ್ನು, ನಿರಂಜನ್ ದೇಶಪಾಂಡೆ, “ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಪ್ರವೀಣ್ ಕುಮಾರ್ ಮತ್ತು ಅನಿಲ್‌ಯಾದವ್ ನಟಿಸಿದ್ದಾರೆ. ಈ ಚಿತ್ರಕ್ಕೆ ಕತಾರ್‌ನಲ್ಲಿರುವ ಕ್ಯಾರನ್ ಸುನಿತಾಕೊರೆಯಾ ನಿರ್ಮಾಪಕರು. ನಿರ್ಮಾಪಕರ ಪತಿ ಹ್ಯಾರಿ ಕೂಡ ಚಿತ್ರದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.