Advertisement
ಕಿರಿಯ ಸ್ವಾಮೀಜಿಯವರು ಈಗಾಗಲೇ ಪರ್ಯಾಯ ಸಂಚಾರ ಆರಂಭಿಸಿದ್ದಾರೆ. ಆದರೆ ಕಿರಿಯರೇ ಪೀಠಾರೋಹಣ ಮಾಡುತ್ತಾ ರೆಂದು ಹಿರಿಯ ಸ್ವಾಮೀಜಿ ಯವರು ಸ್ಪಷ್ಟಪಡಿಸಿಲ್ಲ. ಕೊನೆಯ ಕ್ಷಣದವರೆಗೂ ಈ ವಿಷಯ ನಿಗೂಢವಾಗಿ ಉಳಿಯುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ “ಉದಯವಾಣಿ’ ಇಬ್ಬರೂ ಸ್ವಾಮೀಜಿಗಳನ್ನು ಮಾತನಾಡಿಸಿದೆ. ನಮ್ಮಿಬ್ಬರಲ್ಲಿ ಯಾರೂ ಪೀಠಾರೋಹಣ ಮಾಡಬಹುದು
– ಅದಮಾರು ಹಿರಿಯ ಶ್ರೀಪಾದರು
Related Articles
ಹಾಗೇನೂ ಇಲ್ಲ. ಪೀಠಾರೋಹಣ ಮಾಡುವವರು ಪರ್ಯಾಯ ಮೆರವಣಿಗೆಯಲ್ಲಿ ಬರಬೇಕಾದ ಆವಶ್ಯಕತೆಯೂ ಇಲ್ಲ, ದಂಡತೀರ್ಥದಲ್ಲಿ ಸ್ನಾನ ಮಾಡಿಬಂದರೆ ಸಾಕು. ಮೆರವಣಿಗೆಯಂತಹ ಕ್ರಮಗಳು ಕೇವಲ ವೈಭವದ ಸಂಕೇತ ಮಾತ್ರ. ಶ್ರೀಕೃಷ್ಣಮಠದಲ್ಲಿದ್ದೇ ನಾವು ಪರ್ಯಾಯ ಪೀಠಾರೋಹಣವನ್ನು ಮಾಡಬಹುದು.
Advertisement
-ಇದರರ್ಥ ತಾವೇ ಪೀಠಾರೋಹಣ ಮಾಡುತ್ತೀರೆಂದೇ?ಹಾಗೂ ಅರ್ಥವಲ್ಲ. ಮುಂದಿನ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ. ನಮ್ಮಿಬ್ಬರಲ್ಲಿ ಯಾರೂ ಪೀಠಾರೋಹಣ ಮಾಡಬಹುದು. – ಪರ್ಯಾಯ ಸಂಚಾರವನ್ನು ಕಿರಿಯ ಸ್ವಾಮೀಜಿಯವರು ಆರಂಭಿಸಿದ್ದಾರಲ್ಲ?
ಪರ್ಯಾಯ ಸಂಚಾರವನ್ನು ಅವರು ಆರಂಭಿಸಿದ್ದು ನಾವು ದೀಪಾವಳಿ ಮುಗಿದ ಬಳಿಕ ಅವರನ್ನು ಸೇರಿಕೊಳ್ಳುತ್ತೇವೆ. ಮತ್ತೆ ಕೆಲವು ದಿನ ಒಟ್ಟಾಗಿ ಸಂಚಾರ ನಡೆಸಿ ಅಗತ್ಯವಿರುವಾಗ ವಾಪಸ್ ಬರುತ್ತೇವೆ. ನಾವೇ ಪರ್ಯಾಯ ಸಂಚಾರ ಆರಂಭಿಸಿದ್ದರೆ ಅಗತ್ಯವಿರುವಾಗ ವಾಪಸು ಬರಲು ಕಷ್ಟವಾಗುತ್ತಿತ್ತು. ಹೀಗೆ ಮಾಡಿದ ಕಾರಣ ಸಂಚಾರ ಮುಂದುವರಿಯುತ್ತಲೇ ಇರುತ್ತದೆ. -ಪರ್ಯಾಯ ದರ್ಬಾರ್ ಅಪರಾಹ್ನ ನಡೆಯುವುದರಿಂದ ಅವಸರ ಆಗುವುದಿಲ್ಲವೆ?
ರಾಜಾಂಗಣವನ್ನು ಖಾಲಿ ಇರಿಸಿಕೊಂಡಿರುವುದರಿಂದ ಅಲ್ಲಿ ದರ್ಬಾರ್ ಸಭೆ ಮಾಡಲು ತೊಂದರೆಯಾಗದು. ಸ್ವಾಮೀಜಿಯವರಿಗೆ ಗಂಧಾದಿ ಉಪಚಾರ, ಪಟ್ಟ ಕಾಣಿಕೆ ಸಮರ್ಪಣೆ ಇತ್ಯಾದಿ ಕಾರ್ಯಕ್ರಮ ಬೆಳಗ್ಗೆ ಬಡಗುಮಾಳಿಗೆಯಲ್ಲಿ ಮುಗಿದಿರುತ್ತದೆ. ರಾಜಾಂಗಣದಲ್ಲಿ ನಡೆಯುವುದು ಸಾರ್ವಜನಿಕ ದರ್ಬಾರ್. -ಶ್ರೀಕೃಷ್ಣ ಮಠದ ಆಡಳಿತವನ್ನು ಕಿರಿಯ ಶ್ರೀಪಾದರಿಗೆ ಕೊಟ್ಟಿದ್ದೀರಂತೆ?
ಹೌದು. ಕೇವಲ ಶ್ರೀಕೃಷ್ಣ ಮಠದ ಪರ್ಯಾಯ ಮಠದ ಅಧಿಕಾರ ಮಾತ್ರವಲ್ಲ, ಅದಮಾರು ಮಠದ ಆಡಳಿತವನ್ನೂ ಅವರಿಗೇ ಕೊಟ್ಟಿದ್ದೇವೆ. -ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಮಾತ್ರ ತಮ್ಮಲ್ಲಿ ಉಳಿದಿದೆಯೆ?
ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯನ್ನೂ ಕಿರಿಯ ಸ್ವಾಮೀಜಿಯವರಿಗೇ ಕೊಡಲು ನಿರ್ಧರಿಸಿದ್ದೆ. ಆದರೆ ಅವರೇ ಆಡಳಿತಾತ್ಮಕ ಹೊರೆ ಹೆಚ್ಚಾಗುತ್ತದೆ ಎಂದು ಹೇಳಿದರು. ಹೀಗಾಗಿ ಸದ್ಯ ಇದನ್ನು ನಾವು ಇರಿಸಿಕೊಂಡಿದ್ದೇವೆ. ಪರ್ಯಾಯ ಅವಧಿ ಮುಗಿದ ಅನಂತರ ಇದನ್ನೂ ಅವರಿಗೇ ಬಿಟ್ಟುಕೊಡುತ್ತೇವೆ. -ತಮ್ಮ ಜವಾಬ್ದಾರಿಯಲ್ಲಿ ಶಿಕ್ಷಣ ಕ್ಷೇತ್ರದ ಸಾಧನೆಗಳೇನು?
ನಾವು ಹತ್ತು ವರ್ಷಗಳಿಂದ ಶಿಕ್ಷಣ ಕ್ಷೇತ್ರದ ಹೊಣೆ ಹೊತ್ತಿದ್ದೇವೆ. ಬೆಂಗಳೂರಿನ ಎರಡು ಕಡೆ ಪ.ಪೂ. ಕಾಲೇಜು ತೆರೆದಿದ್ದೇವೆ. ಸುಮಾರು 50 ಕೋ.ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಬೆಂಗಳೂರಿನ ವಿಜ್ಞಾನ ಸಂಶೋಧನ ಕೇಂದ್ರ ಉತ್ತಮ ಸಾಧನೆ ಮಾಡುತ್ತಿದ್ದು 15 ಸಂಶೋಧಕರು ಪಿಎಚ್‌ಡಿ ಪದವಿ ಪಡೆದಿದ್ದಾರೆ. ನನಗೆ ಈ ಜವಾಬ್ದಾರಿ ಇನ್ನು ಸಾಕು ಎಂದೆನಿಸುತ್ತಿದೆ. -ಮುಂದಿನ ಯೋಚನೆಗಳೇನು?
ನಮಗೆ ಲೌಕಿಕ ವ್ಯವಹಾರದ ಜ್ಞಾನ ಕಡಿಮೆ ಇರುವುದರಿಂದಲೇ ಲೌಕಿಕ ಜ್ಞಾನ ಇರುವ ಶಿಷ್ಯರನ್ನೇ ಸ್ವೀಕರಿಸಿದೆವು. ನಾವು ಎಲ್ಲ ಜವಾಬ್ದಾರಿಗಳನ್ನು ಕಿರಿಯ ಸ್ವಾಮೀಜಿಯವರಿಗೆ ಬಿಟ್ಟುಕೊಟ್ಟು ವೈಯಕ್ತಿಕ ಸಾಧನೆ ಮಾಡಿಕೊಂಡು ಇರಬೇಕೆಂದಿದ್ದೇವೆ. ಗುರುಗಳ ಆದೇಶದಂತೆ ನಡೆದುಕೊಳ್ಳುತ್ತೇವೆ
– ಅದಮಾರು ಕಿರಿಯ ಸ್ವಾಮೀಜಿ -ನೀವು ಪರ್ಯಾಯ ಸಂಚಾರದಲ್ಲಿರುವುದರಿಂದ ನೀವೇ ಪರ್ಯಾಯ ಪೀಠಾರೋಹಣ ಮಾಡುತ್ತೀರೆಂಬ ಅರ್ಥವೇ?
ಹಾಗೇನೂ ಇಲ್ಲ. ಪರ್ಯಾಯ ಸಂಚಾರದ ಮುಖ್ಯ ಉದ್ದೇಶ ಪರ್ಯಾಯ ಅವಧಿಯಲ್ಲಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಬರಲು ಮಠದಿಂದ ಭಕ್ತರಿಗೆ ಆಹ್ವಾನ ಕೊಡುವುದು. “ನಮ್ಮ ಮಠದ ಪರ್ಯಾಯ ನಡೆಯುತ್ತಿದೆ. ಜ್ಞಾನಾರ್ಜನೆಗಾಗಿ ಉಡುಪಿಗೆ ಬನ್ನಿ. ಉಡುಪಿ ಶ್ರೀಕ್ಷೇತ್ರ ದರ್ಶನ ಮಾಡಿ ಜೀವನದಲ್ಲಿ ಸಾಧನೆಗಳನ್ನು ಮಾಡಿಕೊಳ್ಳಿ’ ಎಂದು ಹೇಳುತ್ತಿದ್ದೇವೆ. ಇದರ ಜತೆಗೆ ನಾವೂ ಆಯಾ ಕ್ಷೇತ್ರಗಳ ದರ್ಶನ ಮಾಡಿ, ತೀರ್ಥಸ್ನಾನಾದಿಗಳನ್ನು ಮಾಡುತ್ತೇವೆ. -ಪರ್ಯಾಯ ಮಠದ ಆಡಳಿತವನ್ನು ನೀವೇ ನಡೆಸುವುದಂತೆ?
ಹಿರಿಯ ಸ್ವಾಮೀಜಿಯವರೇ ಆಡಳಿತ ನೋಡಿಕೊಂಡರೆ ಉತ್ತಮ. ಆಡಳಿತ ಎನ್ನುವುದು ಸದಾ ತಲೆಬಿಸಿಯನ್ನು ಕೊಡುತ್ತಿರುತ್ತದೆ. -ಪರ್ಯಾಯದ ಅವಧಿಯಲ್ಲಿ ಯೋಜನೆಗಳು ಏನಿವೆ?
ಅಂತಹ ಯೋಜನೆಗಳೇನೂ ಇಲ್ಲ. ಗುರುಗಳಲ್ಲಿ ಚರ್ಚಿಸಿ ಅವರು ಹೇಳಿದಂತೆ ನಡೆಯುತ್ತೇವೆ. ನಮ್ಮ ಯೋಚನೆಗಳನ್ನು ಅವರಿಗೆ ಹೇಳುತ್ತೇವೆ. ಗುರುಗಳ ಆದೇಶದಂತೆ ನಡೆದುಕೊಳ್ಳುತ್ತೇವೆ.