ಪಡುಬಿದ್ರಿ: ಅದಮಾರು ಪೂರ್ಣಪ್ರಜ್ಞ ಪ. ಪೂ. ಕಾಲೇಜಿನ ರಾತ್ರಿ ಕಾವಲುಗಾರ ಎರ್ಮಾಳು ಬಡಾ ನಿವಾಸಿ ನವೀನ್ ಬಂಗೇರಾ (53) ಅವರು ಶುಕ್ರವಾರ ಬೆಳಿಗ್ಗೆ ಶಾಲೆಯಿಂದ ಸುಮಾರು ನೂರು ಮೀಟರ್ ದೂರವಿರುವ ಕುಂಜೂರು ಗ್ರಾಮದ ಯಶೋದಾ ಮಡಿವಾಳ ಎಂಬವರ ವಾಸದ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಶೋದಾ ಮನೆಯವರು ಇಂದು ೬-೩೦ರ ಸುಮಾರಿಗೆ ಮನೆಯಿಂದ ಹೊರ ಬಂದಾಗ ಬಾವಿಕಟ್ಟೆಯಲ್ಲಿ ಪರ್ಸ್, 100, 50 ಮತ್ತು 500ರ ನೋಟ್‌ಗಳು ಚೆಲ್ಲಿತ್ತು. ಕೆಲವು ನೋಟ್‌ಗಳನ್ನು ಹರಿದು ಎಸೆಯಲಾಗಿತ್ತು. ಈ ವಿಷಯವರಿತು ಸ್ಥಳಕ್ಕೆ ಬಂದಿದ್ದ ಸ್ಥಳೀಯರೊಬ್ಬರು ಮೊಬೈಲಲ್ಲಿ ಚಿತ್ರೀಕರಿಸಿ ಆಡಿಯೋ ಒಂದನ್ನೂ ಅಪ್‌ಲೋಡ್ ಮಾಡಿದ್ದು ಪೊಲೀಸರಿಗೂ ಕರೆ ಮಾಡಿ ತಿಳಿಸಿದ್ದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಅನತಿ ದೂರದಲ್ಲೇ ನವೀನ್ ಅವರ ಮೊಬೈಲ್ ಕೂಡಾ ಪತ್ತೆಯಾಗಿದೆ. ಸ್ಥಳದಲ್ಲಿದ್ದ ಪರ್ಸನ್ನು ಪೊಲೀಸರು ಪರಿಶೀಲಿಸಿದಾಗ, ಅದರಲ್ಲಿ ನವೀನ್ ಅವರ ಫೊಟೋ ಮತ್ತು ಅದಮಾರು ಸಂಸ್ಥೆಯ ಪತ್ರ ಸಿಕ್ಕಿದೆ. ಇದರಿಂದಾಗಿ ನವೀನ್ ಅವರು ಬಾವಿಗೆ ಹಾರಿರಬೇಕೆಂಬ ಶಂಕೆ ದೃಢವಾಗಿದೆ.
ಆ ಕೂಡಲೇ ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬಂದಿ ಬಾವಿಯಲ್ಲಿ ಹುಡುಕಾಡಿದಾಗ ನವೀನ್ ಮೃತದೇಹ ಪತ್ತೆಯಾಗಿದೆ.
ಅವಿವಾಹಿತರಾದ ನವೀನ್ ಅವರು ಕುಡಿತದ ಚಟವನ್ನೂ ಹೊಂದಿದ್ದರು. ಕೆಲವೊಮ್ಮೆ ವಿಪರೀತವಾಗಿ ವರ್ತಿಸುತ್ತಿದ್ದ ಅವರು ಜೀವನದಲ್ಲಿನ ಜಿಗುಪ್ಸೆಯಿಂದ ಬಾವಿಗೆ ಹಾರಿರಬಹುದಾಗಿ ವರದಿಯಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ: ಮೂವರು ವಿದ್ಯಾರ್ಥಿನಿಯರಿಗೆ ಷರತ್ತುಬದ್ಧ ಜಾಮೀನು ಮಂಜೂರು