ಚಿಕ್ಕಬಳ್ಳಾಪುರ: ಸಾರ್ವಜನಿಕರಿಗಾಗಿ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ನಾಗರಿಕರು ವಿವಿಧ ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹೋಬಳಿ ಮಟ್ಟದ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ(ಚಿನ್ನಿ) ಹೇಳಿದರು.
ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ತಾಲೂಕು ಆಡಳಿತ ತಾಲೂಕಿನ ಮಂಡಿಕಲ್ಲು ಪ್ರೌಢ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಜಿಲ್ಲಾಡಳಿತದ ನಡೆ ಗ್ರಾಮಗಳಕಡೆ’ ಶೀರ್ಷಿಕೆಯಡಿ ವಿವಿಧ ಇಲಾಖೆಗಳ ಸೇವೆಗಳನ್ನು ಒದಗಿಸಲು ಹೋಬಳಿ ಮಟ್ಟದ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
20 ದಿನಗಳಲ್ಲಿ ಸೇವೆ: ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಜಿಲ್ಲಾಡಳಿತ ಹಾಗೂ ಜಿಪಂ ಸಾರ್ವಜನಿಕರಿಗೆ ನೇರವಾಗಿ ವಿವಿಧಯೋಜನೆಗಳ ಸವಲತ್ತುಗಳನ್ನು ತಲುಪಿಸುವ ಸಲುವಾಗಿ ಹೋಬಳಿ ಮಟ್ಟದಲ್ಲಿ ಅದಾಲತ್ ಹಮ್ಮಿಕೊಂಡಿದೆ. ಅರ್ಹ ಫಲಾನುಭವಿಗೆ ಕೇವಲ 20 ದಿನಗಳಲ್ಲಿ ಸೇವೆ ಸಿಗುವಂತೆ ಮಾಡುವುದು ಹಾಗೂ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದು ಈ ಕಾರ್ಯ ಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ವಿಸ್ತರಿಸುವ ಚಿಂತನೆ: ಜಿಲ್ಲಾಧಿಕಾರಿ ಆರ್. ಲತಾ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಚಿಂತನೆಯಂತೆ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಹೋಬಳಿ ಮಟ್ಟದ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 22 ದಿನಗಳ ಕಾಲ ಈ ಮಂಡಿಕಲ್ಲು ಹೋಬಳಿ ಯಲ್ಲಿ ಅದಾಲತ್ ನಡೆಯಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿಸ್ತರಿಸುವ ಚಿಂತನೆ ಯಿದೆ ಎಂದರು. ಜಿಪಂ ಸಿಇಒ ಪಿ. ಶಿವ ಶಂಕರ್ ಮಾತನಾಡಿ, ಅದಾಲತ್ ಮುಖಾಂತರ ಪರಿಣಾಮಕಾರಿಯಾಗಿ ಎಲ್ಲಾ ಯೋಜನೆ ಗಳನ್ನು ಅನುಷ್ಠಾನಗೊಳಿ ಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಪಿ.ಎನ್.ಕೇಶವರೆಡ್ಡಿ ಮಾತನಾಡಿ ದರು. ಕಾರ್ಯಕ್ರಮದಲ್ಲಿ ವಿವಿಧ ಇಲಾ ಖೆಯ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ನಂತರ ಗಣ್ಯರು ವಿವಿಧ ಫಲಾನುಭವಿಗಳಿಗೆ ಜಾಬ್‌ಕಾರ್ಡ್, ವಿಧವಾ ವೇತನಾ, ಮಂಜೂರಾತಿ ಪತ್ರ ವಿತರಿಸಿದರು. ಎಸ್ಪಿ ಮಿಥುನ್ ಕುಮಾರ್, ಉಪವಿಭಾ ಗಾಧಿ ಕಾರಿ ರಘು ನಂದನ್, ಜಿಪಂ ಉಪ ಕಾರ್ಯದರ್ಶಿ ನೋಮೇಶ್, ತಹಶೀ ಲ್ದಾರ್ ನಾಗ ಪ್ರಶಾಂತ್, ರವಿ, ಆರೋಗ್ಯಾಧಿ ಕಾರಿ ಇಂದಿರಾ ಕಬಾಡೆ ಸೇರಿದಂತೆ ಜನಪ್ರತಿ ನಿಧಿಗಳು, ಜಿಲ್ಲಾ ಮಟ್ಟದಅಧಿಕಾರಿಗಳು ಉಪಸ್ಥಿತರಿದ್ದರು.
ಅಧಿಕಾರಿ ಹಾಗೂ ಸಿಬ್ಬಂದಿಗಳು ಗ್ರಾಮಗಳಿಗೆ ಭೇಟಿ ನೀಡಿ ಮನೆ ಮನೆಗಳಿಗೆ ತೆರಳಿ ಆ ಕುಟಂಬದ ಬೇಡಿಕೆಗೆ ಅನುಗುಣವಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಅರ್ಹ ಫಲಾನುಭವಿಗೆ ಪರಿಹಾರ ಒದಗಿಸುವಕಾರ್ಯ ಮಾಡುತ್ತಾರೆ. ಗ್ರಾಪಂ ಹಾಗೂ ನಾಡಕಚೇರಿಗಳಲ್ಲೂ ಅರ್ಜಿ ಸ್ವೀಕರಿಸಲಾಗುವುದು.
– ಆರ್.ಲತಾ, ಜಿಲ್ಲಾಧಿಕಾರಿ