ಚಾಮರಾಜನಗರ: ಜಿಲ್ಲೆಯ 13 ನ್ಯಾಯಾಲಯಗಳಲ್ಲಿ ನಡೆದ ಮೆಗಾ ಲೋಕ ಅದಾಲತ್ ನಲ್ಲಿ ಒಟ್ಟು 10,920 ಪ್ರಕರಣ ಇತ್ಯರ್ಥ ವಾದವು. ಇದರಲ್ಲಿ 2007 ವಿಚಾರಣೆ ಹಂತ, 8,913 ವ್ಯಾಜ್ಯ ಪೂರ್ವ ಪ್ರಕರಣಗಳಾಗಿವೆ.
ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ಕೋರ್ಟ್ ನಲ್ಲಿ ಬಾಕಿ ಇದ್ದ, ವ್ಯಾಜ್ಯಪೂರ್ವ ಪ್ರಕರಣ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸುವ ಸಲುವಾಗಿ ಮೆಗಾ ಲೋಕ ಅದಾಲತ್ ಆಯೋಜಿಸಲಾಗಿತ್ತು. ಇದರಲ್ಲಿ 7.72 ಕೋಟಿ ಮೊತ್ತದ ವ್ಯಾಜ್ಯಗಳು ಇತ್ಯರ್ಥಗೊಂಡಿವೆ.
ಇತ್ಯರ್ಥವಾದ ಪ್ರಕರಣಗಳು: ಚಾಮರಾಜ ನಗರ ಕೋರ್ಟ್‌ನಲ್ಲಿ 5,933, ಕೊಳ್ಳೇಗಾಲ 3,038, ಯಳಂದೂರು 444, ಗುಂಡ್ಲುಪೇಟೆ ಯಲ್ಲಿ 1,505 ಪ್ರಕರಣ ವಿಲೇವಾರಿಯಾಗಿವೆ. ಸಾರ್ವಜನಿಕ ಹಿತಾಸಕ್ತಿ ಪ್ರಕರಣ ಹೊರತು ಪಡಿಸಿ ಸಿವಿಲ್, ದಾಂಪತ್ಯ ಜೀವನಕ್ಕೆ ಸಂಬಂ ಧಿಸಿದ, ಮೋಟಾರ್ ವಾಹನ ಅಪಘಾತ, ಬ್ಯಾಂಕ್, ವಿದ್ಯುತ್ ಕಳವು ಸಂಬಂಧ ಪ್ರಕರ ಣಗಳು ಸೇರಿ ರಾಜಿ ಯೋಗ್ಯ ಪ್ರಕರಣಗಳನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಇತ್ಯರ್ಥಪಡಿಸಲಾಯಿತು.
ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ಅದಾಲತ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೊಲೀಸ್, ಕಂದಾಯ, ಕಾರ್ಮಿಕ ಸೇರಿ ವಿವಿಧ ಇಲಾಖೆ, ವಕೀಲರು, ಪಕ್ಷಗಾರರ ಸಹಕಾರದಿಂದ ಹೆಚ್ಚು ಪ್ರಕರಣ ಇತ್ಯರ್ಥ ಪಡಿಸಲು ಸಾಧ್ಯವಾಯಿತು ಎಂದು ಹೇಳಿದರು.
ಹಲವು ವರ್ಷಗಳಿಂದ ಬಗೆಹರಿಯದೇ ಉಳಿದಿದ್ದ ಪ್ರಕರಣಗಳನ್ನು ರಾಜಿ ಸಂಧಾನದಲ್ಲಿ ಇತ್ಯರ್ಥಪಡಿಸಲಾಗಿದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯ ಮನವೊಲಿಸಿ, ಅವರನ್ನು ಮತ್ತೆ ಒಂದು ಮಾಡಲಾಯಿತು. ಆಸ್ತಿ ಭಾಗಕ್ಕೆ ಸಂಬಂಧಿಸಿದ ಸೋದರರ ಪ್ರಕರಣವನ್ನು ರಾಜಿ ಮಾಡಿಸಲಾಗಿದೆ. ಭೂ ಮಾಲಿಕರಿಗೆ 25 ಲಕ್ಷ ರೂ. ಹಣ ವಾಪಸ್ ಕೊಡಿಸಲಾಗಿದೆ ಎಂದು ಅವರು ತಿಳಿಸಿದರು.
ಮಳೆಯ ನಡುವೆಯೂ ಯಶ ಕಂಡ ಅದಾಲತ್: ಜಿಲ್ಲೆಯಲ್ಲಿ ವಾಯುಭಾರ ಕುಸಿತ ದಿಂದ ಜಿಟಿ ಜಿಟಿ ಮಳೆ ಇದ್ದರೂ ಪಕ್ಷಗಾರರು ನ್ಯಾಯಾಲಯಕ್ಕೆ ಆಗಮಿಸಿ ಅದಾಲತ್ ಯಶಸ್ಸಿಗೆ ಸಹಕಾರಿಯಾದರು. ಈ ಬಾರಿ 10 ಸಾವಿರಕ್ಕೂ ಹೆಚ್ಚು ಪ್ರಕರಣ ಇತ್ಯರ್ಥ ಪಡಿಸಿದ್ದು ದಾಖಲೆಯಾಗಿದೆ. ಕಳೆದ ಬಾರಿ ನಡೆದಿದ್ದ ಅದಾಲತ್‌ನಲ್ಲಿ 9,293 ಪ್ರಕರಣ ಇತ್ಯರ್ಥ ಪಡಿಸಲಾಗಿತ್ತು. ಈ ಬಾರಿ ನಿರೀಕ್ಷೆಗೂ ಮೀರಿ 10,920 ಪ್ರಕರಣ ವಿಲೇವಾರಿಯಾಗಿವೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಕೆ.ವಿರೂಪಾಕ್ಷಸ್ವಾಮಿ ಉಪಸ್ಥಿತರಿದ್ದರು.