Advertisement

“ಕಮಲ-ದಳ ಸಖ್ಯ ಒದ್ದು ಬಂದವರ ಜತೆ ಮದುವೆಯಾದಂತಿದೆ”

03:07 PM Jan 31, 2021 | Team Udayavani |

ಧಾರವಾಡ: ವಿಧಾನ ಪರಿಷತ್ತಿನಲ್ಲಿ ಬಿಜೆಪಿ-ಜೆಡಿಎಸ್‌ ಹೊಂದಾಣಿಕೆಯು ಒದ್ದು ಬಂದವರೊಂದಿಗೆ ಮದುವೆ ಆಗಲು ಹೊರಟಂತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಲೇವಡಿ ಮಾಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ -ಬಿಜೆಪಿ ಮಧ್ಯೆ ಮೈತ್ರಿ ಏರ್ಪಟ್ಟಿದ್ದು, ಸಭಾಪತಿ ಹುದ್ದೆಯನ್ನು ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ನೀಡಲು ಎರಡೂ ಪಕ್ಷಗಳು ಒಪ್ಪಿಗೆ ಸೂಚಿಸಿವೆ. ಆದರೆ ನಾವು ಯಾರನ್ನು ಒದ್ದು ಬಂದೆವೋ ಅವರ ಜತೆ ಬಿಜೆಪಿ ಮದುವೆ ಆಗುತ್ತಿದೆ. ಇದು ಶೇಕ್ಸ್‌ಪಿಯರ್‌ನ ಹೆಂಬ್ಲೆಟ್‌ ನಾಟಕದ ದೃಶ್ಯದಂತಿದ್ದು, ಜನಸ್ನೇಹಿಯಲ್ಲದ  ಇಂತಹ ಹೊಂದಾಣಿಕೆ ರಾಜಕಾರಣ ಬಗ್ಗೆ ಬಿಜೆಪಿ ಹೈಕಮಾಂಡ್‌ ತೀರ್ಮಾನಿಸಬೇಕು ಎಂದರು.

ದೆಹಲಿಯಲ್ಲಿ ಯುಪಿಎ, ಬೆಂಗಳೂರಲ್ಲಿ ಎನ್‌ಡಿಎ ಎನ್ನುವ ಜೆಡಿಎಸ್‌ ನಿಜ ಬಣ್ಣವೇ ಗೊತ್ತಾಗುತ್ತಿಲ್ಲ. ಅವರದ್ದು ಬರೀ ಹೊಂದಾಣಿಕೆ ರಾಜಕಾರಣ. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಈಗ ದೆಹಲಿಯಲ್ಲಿ ಗುಲಾಂ ನಬಿ ಆಜಾದ್‌ ಜತೆ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿಯವರ ಜತೆ ಇದ್ದಾರೆ. ಮಾತಿನಲ್ಲಿ ರೈತ ಎನ್ನುವ ಈ ಮಣ್ಣಿನ ಮಕ್ಕಳು ಮೊನ್ನೆ ಏಕೆ ಬಾಯಿ ಬಿಡಲಿಲ್ಲ. ಇಂತಹ ಅವಕಾಶವಾದಿ ರಾಜಕೀಯ ಪಕ್ಷಗಳ ಜತೆ ಸೇರುವುದೂ ದೊಡ್ಡ ಅಪಾಯ ಎಂದರು.

ಮಂತ್ರಿಯಾಗಲು ಸಿಡಿದೆದ್ದಿದ್ದಲ್ಲ: ಚುನಾಯಿತರಾಗುವವರೆಗೆ ಸಚಿವ ಸ್ಥಾನವಿಲ್ಲ ಎಂಬ ಸುಪ್ರೀಂ ಕೋರ್ಟ್‌ ಆದೇಶ ಸ್ವಾಗತಿಸುತ್ತೇನೆ. ಆದರೆ, ವಿಶ್ವನಾಥರ ಕನಸು ಭಗ್ನ ಎಂದು ಬಿಂಬಿಸುತ್ತಿರುವಂತೆ ಏನೂ ಆಗಿಲ್ಲ. 17 ಜನ ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ರಾಜೀನಾಮೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಇತಿಹಾಸ. ಅವರೆಲ್ಲ ಮಂತ್ರಿ ಆಗಲೇಬೇಕು ಎಂಬ ಹಠದಿಂದ ಕಾಂಗ್ರೆಸ್‌-ಜೆಡಿಎಸ್‌ ತೊರೆದವರಲ್ಲ. ಆಯಾ ಶಾಸಕಾಂಗ ಪಕ್ಷಗಳ ನಾಯಕರ ವಿರುದ್ಧ ಎದ್ದ ದಂಗೆಯೇ ಹೊರತು ಮಂತ್ರಿಯಾಗಲು ಅಲ್ಲ. ಮಂತ್ರಿ ಆಗಬೇಕೆಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ, ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದರು.

ಇದನ್ನೂ ಓದಿ:ಮಕ್ಕಳನ್ನು ಪುಸ್ತಕದ ಹುಳುಗಳಾಗಿಸಿ

Advertisement

ಕರ್ನಾಟಕದಲ್ಲಿ ರಾಕ್ಷಸ ರಾಜಕಾರಣ, ಕುಟುಂಬ ರಾಜಕಾರಣ ಕೊನೆಯಾಗಬೇಕೆಂದು ಅಂದು ರಾಜಭವನದ ಎದುರು ನಿಂತು ಹೇಳಿದ್ದೆವು. ಇತ್ತೀಚೆಗೆ ಪ್ರಧಾನಿ ಮೋದಿಯವರೂ ಈ ಬಗ್ಗೆ ಹೇಳಿಕೆ ನೀಡಿ, ಕುಟುಂಬ ರಾಜಕಾರಣ ದೇಶದ ಜನತಂತ್ರ ವ್ಯವಸ್ಥೆಯನ್ನು ಗೆದ್ದಿಲು ತಿಂದಂತೆ ತಿನ್ನುತ್ತಿದೆ. ಇದಕ್ಕೆ ಕೊನೆ ಹಾಡಬೇಕು ಎಂದಿದ್ದಾರೆ. ಯಡಿಯೂರಪ್ಪ ಪುತ್ರ, ಅನಂತಕುಮಾರ ಪತ್ನಿಗೆ ಟಿಕೆಟ್‌ ನಿರಾಕರಿಸಿರುವ ಉದಾಹರಣೆ ನಮ್ಮ ಮುಂದಿದೆ. ಮುಂದೆ ಸುರೇಶ ಅಂಗಡಿ ಕುಟುಂಬದವರಿಗೆ ಟಿಕೆಟ್‌ ನಿರಾಕರಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು ಎಂದರು.

2014ರಲ್ಲಿ 18 ಜನರು, 2004ರಲ್ಲಿ 7 ಜನ ಶಾಸಕರು ಪಕ್ಷಾಂತರ ಮಾಡಿದರು. ಮಾತ್ರವಲ್ಲ ಮಾಜಿ ಸಿಎಂ ಸಿದ್ದರಾಮಯ್ಯ 6 ಸಲ, ರಮೇಶಕುಮಾರ 9 ಸಲ ಪಕ್ಷಾಂತರ ಮಾಡಿದ್ದಾರೆ. ಆದರೆ, ಇವರ ಪಕ್ಷಾಂತರವನ್ನು ಗಂಭೀರವಾಗಿ ಪರಿಗಣಿಸದೆ ಈಗ ನಮಗೆ ಪಕ್ಷಾಂತರಿಗಳು, ಅತೃಪ್ತರು ಎಂಬ ಪಟ್ಟ ಕಟ್ಟಲಾಗುತ್ತಿದೆ. ಇದು ಯಾವ ನ್ಯಾಯ? ನಮ್ಮದು ಪಕ್ಷಾಂತರ ಅಲ್ಲ. ಆಡಳಿತ ಪಕ್ಷಗಳ ಸಿದ್ಧಾಂತ, ಮುಖಂಡರ ನಡೆ ವಿರುದ್ಧ ನಡೆದ ದಂಗೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next