Advertisement

ಬಂದ್‌ಗೆ ನೀರಸ ಪ್ರತಿಕ್ರಿಯೆ

01:05 PM Feb 14, 2020 | Naveen |

ಯಾದಗಿರಿ: ಡಾ| ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಗಡಿ ಜಿಲ್ಲೆ ಯಾದಗಿರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸೇರಿದಂತೆ ಹಲವು ಅಂಶಗಳಿರುವ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ರಾಜ್ಯಾದ್ಯಾಂತ ಬಂದ್‌ ಆಚರಿಸಿದರೆ ಯಾದಗಿರಿಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮಾತ್ರ ಮನವಿ ಸಲ್ಲಿಸಿದರು.

ನಗರದಲ್ಲಿ ಜನರು ಬೆಳಗ್ಗೆಯಿಂದಲೇ ನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ವ್ಯಾಪಾರಸ್ಥರು ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ಮಾಡಿದರು. ಇನ್ನೂ ಶಾಲಾ ಕಾಲೇಜುಗಳು, ಸಾರಿಗೆ ಬಸ್‌ ಸೇರಿದಂತೆ ಖಾಸಗಿ ವಾಹನಗಳ ಸಂಚಾರವೂ ಎಂದಿನಂತೆ ಕಂಡು ಬಂತು.

ವಡಗೇರಾದಲ್ಲೂ ನೀರಸ ಪ್ರತಿಕ್ರಿಯೆ: ಕರ್ನಾಟಕ ಬಂದ್‌ಗೆ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಡಾ| ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್‌ ಗೆ ಸ್ಪಂದನೆ ಸಿಗಲಿಲ್ಲ. ಯತಾಸ್ಥಿತಿಯಲ್ಲಿ ವ್ಯಾಪಾರ ವಹಿವಾಟು ನಡೆಯಿತು. ಸಾರಿಗೆ ಸಂಚಾರ, ಕಚೇರಿ, ಶಾಲಾ ಕಾಲೇಜುಗಳು ಎಂದಿನಂತೆ ನಡೆದವು. ಸ್ಥಳೀಯ ಯಾವುದೇ ಕನ್ನಡಪರ ಸಂಘಟನೆಗಳು ಮನವಿ ಪತ್ರ, ಧರಣಿ ಸತ್ಯಾಗ್ರಹ ಮಾಡದೆ ತಟಸ್ಥ ಧೋರಣೆ ತಾಳಿದವು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮನವಿ: ಡಾ| ಸರೋಜಿನಿ ಮಹಿಷಿ ವರದಿ ಯಥಾವತ್‌ ಜಾರಿಗೊಳಿಸುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಡಳಿತಕ್ಕೆ ಮನವಿ ಸ್ಲಲಿಸಿತು. ಕನ್ನಡ ಪರ ಸಂಘಟನೆಗಳಿಂದ ಕರ್ನಾಟಕ ಬಂದ್‌ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಕಾರ್ಯಕರ್ತರು ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಖಾಜಾ ಮೈನುದ್ದಿನ್‌, ರಾಜ್ಯದಲ್ಲಿ ಅನ್ಯ ರಾಜ್ಯ, ದೇಶಗಳಿಂದ ಬರುವ ಕಂಪನಿಗಳು ಇಲ್ಲಿನ ಪ್ರಾಕೃತಿಕ ಸಂಪತ್ತು ಬಳಕೆ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿರುವುದಲ್ಲದೇ ಕನ್ನಡಿಗರಿಗೆ ಉದ್ಯೋಗ ನೀಡದೇ ಅವಮಾನಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವರದಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಆದರೆ ರಾಜಕೀಯ ಕಾರಣಗಳಿಂದ ಇದುವರೆಗೆ ವರದಿ ಜಾರಿಗೊಳಿಸದೇ ಕನ್ನಡಿಗರಿಗೆ ಅನ್ಯಾಯ ಮಾಡಿರುವುದು ಘೋರ ಅಪಚಾರ ಎಂದು ಅವರು ಟೀಕಿಸಿದರು.

ಅಖಂಡ ಕರ್ನಾಟಕ ಬಂದ್‌ಗೆ ವೇದಿಕೆ ಬೆಂಬಲಿಸುತ್ತದೆ. ಮತ್ತು ತಕ್ಷಣ ವರದಿ ಜಾರಿಗೆ ಸರ್ಕಾರ ಮುಂದಾಗಬೇಕು. ಇಲ್ಲವಾದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಸರ್ಕಾರ ಈಡಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಲಕ್ಷ್ಮಣ ಚವ್ಹಾಣ, ಬಾಬು ರಾಠೊಡ, ಜಿತ್ತು ರಾಠೊಡ, ವಿಶಾಲ ಪವಾರ, ಶಂಕರಬಾಬು ರಾಠೊಡ, ಕಿರಣ ಚವ್ಹಾಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next