ಅಡಚಣೆಗಾಗಿ ಕ್ಷಮಿಸಿ…ಇದು ನಿರ್ದೇಶಕ “ಜೋಗಿ’ ಪ್ರೇಮ್ ಶಿಷ್ಯ ಭರತ್ ನವುಂದ ಸದ್ದಿಲ್ಲದೆಯೇ ನಿರ್ದೇಶಿಸಿರುವ ಚಿತ್ರ. ಇನ್ನೇನು ಒಂದೆರಡು ದೃಶ್ಯಗಳನ್ನು ಚಿತ್ರೀಕರಿಸಿದರೆ ಚಿತ್ರೀಕರಣ ಮುಗಿಯಲಿದೆ. ಇಂದು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಲಿದ್ದು, ಭರತ್ ಗುರು ಪ್ರೇಮ್ ಇಂದು ಸಂಜೆ ಆರಕ್ಕೆ ಝೇಂಕಾರ್ ಚಾನಲ್‌ನ ಮೂಲಕ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ.
ಚಿತ್ರದಲ್ಲಿ ಒಂಭತ್ತು ಮುಖ್ಯ ಪಾತ್ರಗಳಿದ್ದು, ಅವುಗಳ ಸುತ್ತವೇ ಚಿತ್ರ ಸಾಗಲಿದೆ. ಹಾಗಾಗಿ, ಒಂಭತ್ತು ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಯೋಚನೆ ನಿರ್ದೇಶಕರಿಗಿದೆ. ಮೊದಲನೆಯದ್ದನ್ನು ಪ್ರೇಮ್ ಮಾಡಿದರೆ, ಹಂತ ಹಂತವಾಗಿ ಮನೋರಂಜನ್ ರವಿಚಂದ್ರನ್, ರಾಗಿಣಿ ಇತರರು ಮೋಷನ್ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.
ಈ ಚಿತ್ರದ ಮೋಷನ್ ಪೋಸ್ಟರ್‌ಗೆ ಬಳಸಿರುವ ಹಿನ್ನೆಲೆ ಸಂಗೀತಕ್ಕೆ ಅಮೆರಿಕ ಕೀಬೋರ್ಡ್ ಪ್ಲೇಯರ್‌ನ ಸ್ಪರ್ಶವಿದೆ. ಈ ಚಿತ್ರದಲ್ಲಿ ಒಂಭತ್ತು ಪಾತ್ರಗಳಿದ್ದು, ಪ್ರದೀಪ್ ವರ್ಮ ಚಿತ್ರದ ಹೀರೋ. “ಡಮ್ಕಿ ಢಮಾರ್’ ನಂತರ ಹೀರೋ ಆಗಿ ನಟಿಸುತ್ತಿರುವ ಎರಡನೇ ಚಿತ್ರವಿದು. ಉಳಿದಂತೆ ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್, ಶಿವುಮಂಜು, ಮೇಘ, ಅರ್ಪಿತಾಗೌಡ, ಶ್ರೀನಿವಾಸ್, ವಿದ್ಯಾ, ಗಿರಿ, ಹರಿಪ್ರಸಾದ್ ಇತರರು ನಟಿಸುತ್ತಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳು ಕಾಣಿಸಿಕೊಳ್ಳಲಿವೆ. “ಅಡಚಣೆಗಾಗಿ ಕ್ಷಮಿಸಿ’ ಶೀರ್ಷಿಕೆ ಕುರಿತು ಹೇಳುವ ನಿರ್ದೇಶಕರು, “ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ.
ಥ್ರಿಲ್ಲರ್ ಅಂದಾಗ, ನೋಡುಗ ಒಂದೊಂದು ದೃಶ್ಯವನ್ನೂ ಕಲ್ಪನೆ ಮಾಡಿಕೊಳ್ಳುತ್ತಾನೆ. ಮುಂದಿನ ದೃಶ್ಯದ ಕಲ್ಪನೆಗೆ ಅಡಚಣೆ ಮಾಡುವ ಪ್ರಯತ್ನ ಚಿತ್ರಕಥೆಯಲ್ಲಿದೆ. ಹಾಗಾಗಿ ಆ ಶೀರ್ಷಿಕೆ ಇಡಲಾಗಿದೆ. ಇನ್ನು, ಇಡೀ ಚಿತ್ರ ಮರ್ಡರ್ ಮಿಸ್ಟ್ರಿ ಹಿಂದೆ ನಡೆಯಲಿದೆ. ಇಲ್ಲಿ ಒಂದು ಕಥೆ, ಎರಡು ಚಿತ್ರಕಥೆಗಳಿವೆ’ ಎನ್ನುತ್ತಾರೆ ಅವರು.
ಶ್ರೀ ಭೂಮಿಕ ಪ್ರೊಡಕ್ಷನ್ ಮತ್ತು ಎಸ್.ಬಿ.ಎನ್ ಟಾಕೀಸ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಪ್ರದೀಪ್ ವರ್ಮ ಸಂಗೀತವಿದೆ. ಗಂಗು ಈ ಚಿತ್ರದ ಛಾಯಾಗ್ರಾಹಕರು. ಬೆಂಗಳೂರು, ಮಡಿಕೇರಿಯಲ್ಲಿ ಚಿತ್ರೀಕರಣ ನಡೆದಿದೆ. ಏಪ್ರಿಲ್ ಹೊತ್ತಿಗೆ ಚಿತ್ರ ರಿಲೀಸ್ ಆಗಲಿದೆ.