Advertisement
ಅದರಂತೆ ಉಪಮೇಯರ್, ಬಿಬಿಎಂಪಿ ಆಯುಕ್ತರು, ಆಡಳಿತ ಪಕ್ಷ ನಾಯಕರು ಹಾಗೂ ತಮ್ಮ ನೇತೃತ್ವದಲ್ಲಿ ನಾಲ್ಕು ತಂಡಗಳು ಕಾರ್ಯಾಚರಣೆ ನಡೆಸಲಿವೆ ಎಂದರು. ಬಿಜೆಪಿಯ ಉಮೇಶ್ ಶೆಟ್ಟಿ ಮಾತನಾಡಿ, ಕೇವಲ 5 ಕಿ.ಮೀ ಸುತ್ತಳತೆಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿ ವರ್ಷ ಜಾಹೀರಾತಿನಿಂದ 200 ಕೋಟಿ ರೂ. ಆದಾಯ ಬರುತ್ತಿದೆ.
Related Articles
Advertisement
ಸ್ಥಾಯಿ ಸಮಿತಿ ಅಧ್ಯಕ್ಷರ ರಾಜೀನಾಮೆ ಪಡೆಯಿರಿ: ಕೆಎಂಸಿ ಕಾಯ್ದೆಯ ವ್ಯಾಪಾರ ಉಪವಿಧಿಗಳಂತೆ ಸ್ಥಾಯಿ ಸಮಿತಿ ವಾರಕ್ಕೆ ಒಂದು ಸಭೆ ನಡೆಸಬೇಕು. ಆದರೆ, ಕಳೆದ ಐದು ತಿಂಗಳಿಂದ ಲೆಕ್ಕಪತ್ರ ಸ್ಥಾಯಿ ಸಮಿತಿಯಿಂದ ಒಂದೇ ಒಂದು ಸಭೆ ನಡೆಸಿಲ್ಲ. ನಿಯಮದಂತೆ ಮೇಯರ್ ಹಾಗೂ ಉಪಮೇಯರ್ ಹೊರತುಪಡಿಸಿ ಸ್ಥಾಯಿ ಸಮಿತಿಯ ಸದಸ್ಯರು ಮೂರು ಸಭೆಗೆ ಗೈರಾದರೆ ಅವರ ಸದಸ್ಯತ್ವ ರದ್ದುಗೊಳಿಸಬಹುದು. ಹೀಗಾಗಿ ಕೂಡಲೇ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಿಂದ ರಾಜೀನಾಮೆ ಪಡೆಬೇಕು ಎಂದು ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದರು.
ಅನುಪಯುಕ್ತ ವಾಹನಗಳು ಡಂಪಿಂಗ್ ಯಾರ್ಡ್‌ಗೆ: ನಗರ ಸಂಚಾರ ಪೊಲೀಸರು ಜಪ್ತಿ ಮಾಡಿದ ಹಾಗೂ ಅಪಾಘಾತವಾದ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ವೇಲುನಾಯ್ಕರ್ ದೂರಿದರು. ಪದ್ಮನಾಭರೆಡ್ಡಿ ದನಿಗೂಡಿಸಿ, ಜಪ್ತಿ ಮಾಡಿದ ವಾಹನಗಳ ಶೀಘ್ರ ವಿಲೇವಾರಿಗೆ ಕ್ರಮಕೈಗೊಳ್ಳುವಂತೆ ನಗರ ಸಂಚಾರ ಆಯುಕ್ತರಿಗೆ ಪತ್ರ ಬರೆಯಬೇಕು ಎಂದು ಕೋರಿದರು.
ಮೇಯರ್ ಪ್ರತಿಕ್ರಿಯಿಸಿ, ಈ ಹಿಂದೆ ಜಪ್ತಿ ವಾಹನಗಳನ್ನು ವಶಕ್ಕೆ ಪಡೆದಿದ್ದಕ್ಕಾಗಿ ಪೊಲೀಸರು ಪಾಲಿಕೆ ಎಂಜಿನಿಯರ್ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು 15 ದಿನಗಳಲ್ಲಿ ತೆರವುಗೊಳಿಸದಿದ್ದರೆ, ಪಾಲಿಕೆಯಿಂದಲೇ ಅವುಗಳನ್ನು ಡಂಪಿಂಗ್ ಯಾರ್ಡ್‌ಗೆ ಸಾಗಿಸುವ ಕುರಿತು ನಿರ್ಣಯ ತೆಗೆದುಕೊಳ್ಳೋಣ. ಜತೆಗೆ ಪಾಲಿಕೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸದಂತೆ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಲಾಗುವುದು ಎಂದರು.
ಮಧ್ಯಾಹ್ನವೂ ಹಾಜರಾತಿ: ಬಿಬಿಎಂಪಿ ಬಜೆಟ್ ಮೇಲಿನ ಸಭೆಗೆ ಬೆಳಗ್ಗೆ ಆಗಮಿಸುತ್ತಿರುವ ಸದಸ್ಯರು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಸಭೆಯಲ್ಲಿ ಭಾಗವಹಿಸದಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಮಧ್ಯಾಹ್ನದ ನಂತರವೂ ಸದಸ್ಯರಿಂದ ಸಹಿ ಪಡೆಯುವಂತೆ ಕೌನ್ಸಿಲ್ ಸಿಬ್ಬಂದಿಗಳಿಗೆ ಮೇಯರ್ ಸೂಚಿಸಿದರು.
ರುದ್ರಭೂಮಿ ಕಾರ್ಮಿಕರಿಗೆ ಅನುದಾನ: ನಗರದಲ್ಲಿನ ರುದ್ರಭೂಮಿಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕನಿಷ್ಠ ವೇತನ ನೀಡಲು ಕ್ರಮಕೈಗೊಂಡಿದ್ದು, ಅದಕ್ಕೆ ಅಗತ್ಯವಾದ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದ್ದು, ಏಪ್ರಿಲ್‌ನಿಂದ 226 ಕಾರ್ಮಿಕರಿಗೆ 17 ಸಾವಿರ ರೂ. ವೇತನ ನೀಡಲಾಗುವುದು ಎಂದು ಪಾಲಿಕೆಯ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಸಭೆಗೆ ತಿಳಿಸಿದರು.
ಮಹಿಳಾ ಸದಸ್ಯರಿಗೆ ಅನುದಾನ ಹೆಚ್ಚಿಸಿ: ಮಹಿಳಾ ಸದಸ್ಯರಿರುವ ವಾರ್ಡ್‌ಗಳಿಗೆ ವಿಶೇಷವಾಗಿ ಮೀಸಲಿಟ್ಟಿರುವ ಅನುದಾನವನ್ನು ಹೆಚ್ಚಿಸಬೇಕೆಂದು ಹೆಚ್ಚಿನ ಪಾಲಿಕೆ ಸದಸ್ಯರು ಮನವಿ ಮಾಡಿದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮೇಯರ್, ಮಹಿಳೆಯರ ವಿಶೇಷ ಅನುದಾನ ಹೆಚ್ಚಿಸಲಾಗುವುದು ಹಾಗೂ ಅನುದಾನ ಬಳಕೆಗೆ ಏಕಗವಾಕ್ಷಿ ವ್ಯವಸ್ಥೆ ತರಲಾಗುವುದು ಎಂದು ಭರವಸೆ ನೀಡಿದರು.
ಚೂರಿ ಇರಿತ ಖಂಡಿಸಿ ಬಿಜೆಪಿ ಸಭಾತ್ಯಾಗ: ವ್ಯಕ್ತಿಯೊಬ್ಬ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದ ಪ್ರಕರಣವನ್ನು ಮಧ್ಯಾಹ್ನದ ನಂತರ ಸಭೆಯಲ್ಲಿ ಪ್ರಸ್ತಾಪಿಸಿದ ವಿರೋಧ ಪಕ್ಷ ಬಿಜೆಪಿ, ಲೋಕಾಯುಕ್ತರ ಮೇಲಿನ ಹಲ್ಲೆಯ ಬಗ್ಗೆ ಖಂಡನಾ ನಿರ್ಣಯ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಸಭಾತ್ಯಾಗ ಮಾಡಿತು. ಮೊದಲು ವಿಷಯ ಪ್ರಸ್ತಾಪಿಸಿದ ಪದ್ಮನಾಭರೆಡ್ಡಿ, ನಗರದಲ್ಲಿ ಲೋಕಾಯುಕ್ತರಿಗೇ ರಕ್ಷಣೆಯಿಲ್ಲ.
ಇನ್ನು ಜನಸಾಮಾನ್ಯರಿಗೆ ಏನು ರಕ್ಷಣೆ ನೀಡುತ್ತೀರಾ? ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವಕ್ಕೆ ಇದುವೇ ಸಾಕ್ಷಿ ಎಂದು ದೂರಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಇದು ಬಜೆಟ್ ಮೇಲಿನ ಚರ್ಚೆ ಎಂದು ತಿಳಿದೂ, ಪ್ರಚಾರಕ್ಕಾಗಿ ಹೀಗೆಲ್ಲ ಮಾಡುತ್ತಿದ್ದೀರ ಎಂದು ಟೀಕಿಸಿದರು. ಮಾಜಿ ಮೇಯರ್ ಜಿ.ಪದ್ಮಾವತಿ ದನಿಗೂಡಿಸಿ, ಬಿಜೆಪಿಯವರು ಪ್ರಚಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ಟೀಕಿಸಿದರು.
ಮೇಯರ್ ಸಂಪತ್‌ರಾಜ್ ಮಾತನಾಡಿ, ಲೋಕಾಯುಕ್ತರಿಗೆ ಚೂರಿ ಇರಿದ ಆರೋಪಿಯ ವಿಚಾರಣೆ ನಡೆಯುತ್ತಿದೆ. ಸಂಜೆ ವೇಳೆಗೆ ಆತ ಯಾವ ಸಂಘಟನೆಗೆ ಸೇರಿದವನು ಎಂಬುದು ಹೊರಬೀಳಲಿದೆ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು. ಕೋಪದಲ್ಲೇ ಪ್ರತಿಕ್ರಿಯಸಿದ ಪದ್ಮನಾಭರೆಡ್ಡಿ, “ನಿಮ್ಮ ಪ್ರಕಾರ ಆತ ಬಿಜೆಪಿ ಕಾಯಕರ್ತನೇ?’ ಎಂದು ಪ್ರಶ್ನಿಸಿದರು.
ತನಿಖೆ ನಂತರ ಆತ ಯಾರೆಂಬುದು ಗೊತ್ತಾಗುತ್ತದೆ ಕಾದು ನೋಡಿ ಎಂದು ಮೇಯರ್ ಹೇಳಿದ್ದಕ್ಕೆ ಗರಂ ಆದ ಪದ್ಮನಾಭರೆಡ್ಡಿ, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಸಭೆಯಿಂದ ಹೊರನಡೆದರು. ಜೆಡಿಎಸ್ ಸದಸ್ಯರು ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರೊಂದಿಗೆ ಸಭೆಯಿದೆ ಎಂಬ ಕಾರಣ ನೀಡಿ ಮಧ್ಯಾಹ್ನದ ನಂತರ ಸಭೆಗೆ ಹಾಜರಾಗಲಿಲ್ಲ.
ನಗರದ ರಸ್ತೆಗೆ ಮಣಿಕಂಠನ್ ಹೆಸರು: ಆನೆ ದಾಳಿಗೆ ತುತ್ತಾಗಿ ಮೃತಪಟ್ಟ ಭಾರತೀಯ ಅರಣ್ಯ ಸೇವೆ ಅಧಿಕಾರಿ ಎಸ್.ಮಣಿಕಂಠನ್ ಅವರಿಗೆ ಪಾಲಿಕೆ ಸದಸ್ಯರು ಸಂತಾಪ ಸೂಚಿಸಿದರು. ಇದೇ ಸಂದರ್ಭದಲ್ಲಿ ಮಲ್ಲೇಶ್ವರದ ಅರಣ್ಯ ಭವನ ಮುಂಭಾಗದ ರಸ್ತೆಗೆ ಮಣಿಕಂದನ್ ಅವರ ಹೆಸರನ್ನು ನಾಮಕರಣ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪಾಲಿಕೆ ವಿಶೇಷ ಆಯುಕ್ತ (ಹಣಕಾಸು) ಮನೋಜ್ ರಾಜನ್ ಅವರಿಂದ ಮಾಹಿತಿ ಪಡೆದುಕೊಂಡ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರು ಕೌನ್ಸಿಲ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ನಿರ್ಣಯ ಕೈಗೊಂಡರು.