Advertisement

ರಿಯಲ್‌ ಎಸ್ಟೇಟ್‌ ಕಾಯ್ದೆ ಯಥಾವತ್‌ ಜಾರಿ: ಟಿಬಿಜ

11:52 AM May 04, 2017 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯನ್ನು
ರಾಜ್ಯದಲ್ಲಿ ಯಥಾವತ್‌ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದ್ದು, ಈ ಕುರಿತು ಆಡಳಿತ ಸುಧಾರಣಾ ಇಲಾಖೆ ಜತೆ ಚರ್ಚಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ
ಸಂಬಂಧಿಸಿದಂತೆ ರಾಜ್ಯದಲ್ಲಿ ಈಗಾಗಲೇ ಒಂದು ಕಾಯ್ದೆ ಜಾರಿಯಲ್ಲಿದೆ. ಕೇಂದ್ರ ಸರ್ಕಾರದ ಕಾಯ್ದೆ ಜಾರಿಗೊಳಿಸುವ
ಮುನ್ನ ರಾಜ್ಯದ ಕಾಯ್ದೆಯನ್ನು ಸಮಾಪನ ಗೊಳಿಸಬೇಕಾಗುತ್ತದೆ ಎಂದರು. ರಾಜ್ಯದಲ್ಲಿ ಈಗಾಗಲೇ ಒಂದು ಕಾಯ್ದೆ
ಜಾರಿಯಲ್ಲಿರುವುದರಿಂದ ಮತ್ತು ರಿಯಲ್‌ ಎಸ್ಟೇಟ್‌ ಕಡಿವಾಣಕ್ಕೆ ಹೊಸ ಕಾಯ್ದೆ ರೂಪಿಸುವ ಉದ್ದೇಶದಿಂದ ಕಳೆದ ವರ್ಷ ಸರ್ಕಾರ ಹೊಸ ಕಾಯ್ದೆಯ ಕರಡು ಸಿದ್ಧಪಡಿಸಿ ಸಲಹೆಗಾಗಿ ಆಡಳಿತ ಸುಧಾರಣಾ ಇಲಾಖೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ಕೇಂದ್ರದ ಕಾಯ್ದೆ ಜಾರಿಯಾಗಿರುವುದ ರಿಂದ ಹಿಂದೆ ರೂಪಿಸಿದ ಕಾಯ್ದೆಯನ್ನು ಸಮಾಪಮಗೊಳಿಸುವುದು ಮತ್ತು ಕರಡು ವಿಧೇಯಕದ ಬದಲಾಗಿ ಹೊಸ ಕಾಯ್ದೆಯನ್ನು ಜಾರಿಗೆ ತರುವ ಕುರಿತು ಆ ಇಲಾಖೆಯೊಂದಿಗೆ
ಚರ್ಚಿಸಬೇಕಾಗುತ್ತದೆ ಎಂದರು.

ದೇಶದಲ್ಲೇ ಅತಿ ಹೆಚ್ಚು ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಯುವುದು ರಾಜಧಾನಿ ಬೆಂಗಳೂರಿನಲ್ಲಿ. ಆದರೆ, ಅನೇಕ ಸಂದರ್ಭದಲ್ಲಿ ಜನ ಸಾಮಾನ್ಯರು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ವಂಚನೆಗೊಳಗಾಗುತ್ತಿದ್ದಾರೆ. ಇದನ್ನು ತಪ್ಪಿಸಲು
ಕೇಂದ್ರ ರೂಪಿಸಿರುವ ಕಾಯ್ದೆಯಲ್ಲಿ ಸಾಕಷ್ಟು ಕಠಿಣ ನಿಯಮ ಗಳಿದ್ದು, ಅದನ್ನು ಜಾರಿಗೊಳಿಸುವ ಅನಿವಾರ್ಯತೆಯೂ
ಇದೆ ಎಂದು ಹೇಳಿದರು.

ರಿಯಲ್‌ ಎಸ್ಟೇಟ್‌ ಕಾಯ್ದೆ ಜಾರಿಯಾದ ಬಳಿಕ ಅದಕ್ಕೆ ಪ್ರತ್ಯೇಕ ಪ್ರಾಧಿಕಾರ ನೇಮಿಸಬೇಕಾಗುತ್ತದೆ. ಪ್ರಾಧಿಕಾರಕ್ಕೆ
ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಥವಾ ಅವರ ಪ್ರತಿನಿಧಿ ಹಾಗೂ ಕಾನೂನು ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ಸಮಿತಿ ರಚಿಸಬೇಕು. ಈ ಎಲ್ಲಾ ಕಾರ್ಯಗಳನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next