ಚೆನ್ನೈ: ಕನ್ನಡದಲ್ಲಿ ʼನಾಗಮಂಡಲʼ ಸಿನಿಮಾದಲ್ಲಿ ನಟಿಸಿ ಖ್ಯಾತರಾದ ಬಹುಭಾಷಾ ನಟಿ ವಿಜಯಲಕ್ಷ್ಮೀ ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಇದೀಗ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದು ತನ್ನ ಕೊನೆಯ ವಿಡಿಯೋ ಎನ್ನುತ್ತಿದ್ದಾರೆ.
ನಾಮ್ ತಮಿಳರ್ ಪಾರ್ಟಿಯ ಸೀಮಾನ್ ವಿರುದ್ಧ ಮದುವೆ ಆಗುವುದಾಗಿ ಮೋಸ ಮಾಡಿ, ಬದುಕನ್ನೇ ಹಾಳು ಮಾಡಿದ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋವೊಂದನ್ನು ಮಾಡಿದ್ದಾರೆ.
ಆಗಿರೋದೇನು?: ಕನ್ನಡ, ತಮಿಳು ಸೇರಿದಂತೆ ಬಹುಭಾಷೆಯಲ್ಲಿ ನಟಿಸಿರುವ ವಿಜಯಲಕ್ಕ್ಷ್ಮೀ ವೈಯಕ್ತಿಕ ವಿಚಾರಗಳಿಂದ ಕಳೆದ ಕೆಲ ಸಮಯದಿಂದ ಸುದ್ದಿಯಾಗಿದ್ದರು. ನಾಮ್ ತಮಿಳರ್ ಪಕ್ಷದ ನಾಯಕ ಹಾಗೂ ಫಿಲ್ಮ್ ಮೇಕರ್ ಕೂಡ ಆಗಿರುವ ಸೀಮಾನ್ ವಿರುದ್ದ ಕಳೆದ ಕೆಲ ಸಮಯದ ಹಿಂದೆ ಆತ 7 ಬಾರಿ ಗರ್ಭಪಾತ ಮಾಡಿಸಿರುವುದಾಗಿ ಆರೋಪವನ್ನು ಮಾಡಿದ್ದರು. ಈ ಸಂಬಂಧ ಸೀಮಾನ್ ಪೊಲೀಸರ ವಿಚಾರಣೆಯನ್ನು ಎದುರಿಸಿದ್ದರು.
ಇತ್ತೀಚೆಗೆ(ಫೆ.29 ರಂದು) ನಟಿ ವಿಜಯಲಕ್ಷ್ಮೀ ತನ್ನ ಮನೆಯಿಂದಲೇ ವಿಡಿಯೋವೊಂದನ್ನು ಮಾಡಿ ಸೀಮಾನ್ ತನ್ನೊಂದಿಗೆ ಮಾತನಾಡಬೇಕೆಂದಿದ್ದರು. ಈ ವಿಡಿಯೋಗೆ ಸೀಮಾನ್ ಅವರಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಇದರಿಂದ ನೊಂದ ವಿಜಯಲಕ್ಷ್ಮೀ ಮಂಗಳವಾರ(ಮಾ.5 ರಂದು) ಮತ್ತೊಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ವಿಡಿಯೋದಲ್ಲಿ ಏನಿದೆ?: 5 ದಿನ ಕಳೆದರೂ ಸೀಮಾನ್ ಅವರಿಂದ ಯಾವ ಪ್ರತಿಕ್ರಿಯೂ ಬಂದಿಲ್ಲ. ಈ ರೀತಿ ವಿಡಿಯೋ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ನನ್ನ ಮನಸ್ಸಿಗೆ ಎಷ್ಟು ನೋವಾಗಿರಬಹುದೆಂದು ನೀವೇ ಭಾವಿಸಿ. ನನ್ನ ಸಹೋದರಿಯ ಸಮಸ್ಯೆಯಿಂದ ನಾನು ಸೀಮಾನ್ ಅವರನ್ನು ಮೊದಲ ಬಾರಿ ಭೇಟಿ ಆಗಿದ್ದೆ. ಆಗ ಅವರಿಗೆ ಮದುವೆ ಆಗಿರಲಿಲ್ಲ. ಮದುವೆ ಆಗುವುದಾಗಿ ಹೇಳಿ ನನ್ನೊಂದಿಗೆ ಮೂರು ವರ್ಷ ಇದ್ದರು. ನನ್ನನ್ನು ರಹಸ್ಯವಾಗಿ ಮದುವೆಯಾಗಿ ನನ್ನ ಇಡೀ ಜೀವನವನ್ನು ಹಾಳು ಮಾಡಿದರು. ಇದು ನನ್ನ ಕೊನೆಯ ವಿಡಿಯೋ. ಇನ್ನು ಎರಡು ದಿನದೊಳಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ಕರ್ನಾಟಕದಲ್ಲಿ ಸಾಯಲು ಸಿದ್ಧ. ಇದಕ್ಕೆಲ್ಲ ಸೀಮಾನ್ ಕಾರಣ’ಎಂದು ತಮಿಳಿನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಸೀಮಾನ್ ಅವರು ದಯವಿಟ್ಟು ಪ್ರತಿಕ್ರಿಯೆ ನೀಡಿ ಎಂದು ಕೆಲವರು ನಟಿಯ ಪರವಾಗಿ ಕಮೆಂಟ್ ಮಾಡಿದ್ದಾರೆ.