Advertisement

ನಾಗಮಂಡಲದ ನಟಿ ವಿಜಯಲಕ್ಷ್ಮೀ ಆತ್ಮಹತ್ಯೆ ಯತ್ನ ; ಲೈವ್ ವಿಡಿಯೋದಲ್ಲಿ ನಟಿ ಹೇಳಿದ್ದೇನು?

10:23 PM Jul 26, 2020 | Hari Prasad |

ಚೆನ್ನೈ: ನಾಗಮಂಡಲ, ಸೂರ್ಯವಂಶ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಬಹುಭಾಷಾ ನಟಿ ವಿಜಯಲಕ್ಷ್ಮೀ ಅವರು ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

Advertisement

ತಾನು ಬಿಪಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ನಟಿ ವಿಜಯಲಕ್ಷ್ಮೀ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಮತ್ತು ಈ ವಿಡಿಯೋವನ್ನು ತನ್ನ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ತನ್ನ ಇಂದಿನ ಈ ಸ್ಥಿತಿಗೆ ಸೀಮನ್ ಹಾಗೂ ಹರಿನಾಡರ್ ಅವರೇ ಕಾರಣವೆಂದೂ ಮತ್ತು ನನ್ನ ಸಾವಿಗೂ ಅವರಿಬ್ಬರೇ ಕಾರಣರಾಗುತ್ತಾರೆ ಎಂದು ನಟಿ ಈ ವಿಡಿಯೋದಲ್ಲಿ ನೇರ ಆರೋಪವನ್ನು ಮಾಡಿದ್ದಾರೆ.

‘ನನ್ನ ತಾಯಿ ಹಾಗೂ ಸಹೋದರಿಗೋಸ್ಕರವೇ ನಾನಿಷ್ಟು ದಿನ ಜೀವಂತವಾಗಿದ್ದೆ. ಆದರೆ ಇನ್ನು ನನ್ನಿಂದ ಯಾವುದೇ ರೀತಿಯಲ್ಲಿ ಇದನ್ನೆಲ್ಲಾ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಈಗಾಗಲೇ ಮೂರು ಮಾತ್ರೆಗಳನ್ನು ಸೇವಿಸಿದ್ದೇನೆ, ನನ್ನ ಬಿಪಿ ಲೋ ಆಗುತ್ತಿದೆ, ನಾನು ಕನ್ನಡದ ನಟಿ ಎಂಬ ಕಾರಣಕ್ಕೆ ನಟ ಮತ್ತು ರಾಜಕಾರಣಿಯಾಗಿರುವ ಸೀಮನ್ ಮತ್ತು ಹರಿನಾಡರ್ ನನ್ನ ಬದುಕನ್ನೇ ಹಾಳು ಮಾಡಿದ್ದಾರೆ, ನಾನು ಸತ್ತರೆ ಅವರಿಬ್ಬರನ್ನು ಸುಮ್ಮನೆ ಬಿಡಬಾರದು..’ ಎಂದು ವಿಜಯಲಕ್ಷ್ಮೀ ಅವರು ತಮಿಳು ಭಾಷೆಯಲ್ಲಿ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಜಯಲಕ್ಷ್ಮೀ ಅವರನ್ನು ಅವರ ಕುಟುಂಬದವರು ಹಾಗೂ ಸ್ನೇಹಿತರು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯಕ್ಕೆ ನಟಿ ಪ್ರಾಣಾಪಾಯದಿಂದ ಪಾರಾಗಿದ್ದು ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

Advertisement

ಸಾಕಷ್ಟು ಸಮಯಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ನಟಿ ವಿಜಯಲಕ್ಷ್ಮೀ ಅವರು ಒತ್ತಡವನ್ನು ತಾಳಲಾಗದೇ ಈ ನಿರ್ಧಾರಕ್ಕೆ ಬಂದಿರಬಹುದೆಂದು ಅಭಿಪ್ರಾಯ ವ್ಯಕ್ತವಾಗಿದೆ.


ಚೆನ್ನೈನಲ್ಲಿ ಜನಿಸಿದ ವಿಜಯಲಕ್ಷ್ಮೀ ಅವರು ತಮ್ಮ ವಿದ್ಯಾಭ್ಯಾಸವನ್ನೆಲ್ಲಾ ಕರ್ನಾಟಕದಲ್ಲೇ ಪೂರೈಸಿದ್ದರು. ನಿರ್ದೇಶಕ ನಾಗಾಭರಣ ಅವರು ನಿರ್ದೇಶಿಸಿದ್ದ ಪ್ರಕಾಶ್ ರೈ ಅಭಿನಯದ ‘ನಾಗಮಂಡಲ’ ಚಿತ್ರದ ಮೂಲಕ ವಿಜಯಲಕ್ಷ್ಮಿ ಅವರು ಚಿತ್ರರಂಗವನ್ನು ಪ್ರವೇಶಿದ್ದರು.

ಬಳಿಕ ಅವರು ಸೂರ್ಯವಂಶ, ಜೋಡಿ ಹಕ್ಕಿ, ನಂ.1, ಕನಕಾಂಬರಿ, ಡ್ಯಾಡಿ ನಂ.1 ಸೇರಿದಂತೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ನಟಿ ವಿಜಯಲಕ್ಷ್ಮೀ ಅವರು 2006ರಲ್ಲಿಯೂ ಒಮ್ಮೆ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದರು. ತಾನು ಬಯಸಿದ್ದ ಸಹಾಯಕ ನಿರ್ದೇಶಕರೊಬ್ಬರಿಂದ ಕಿರುಕುಳಕ್ಕೊಳಗಾದ ಕಾರಣದಿಂದ ಅವರು ಅಂದು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಅಂದೂ ಸಹ ಸಕಾಲದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಈ ನಟಿ ಬದುಕುಳಿದಿದ್ದರು.

ಆ ಬಳಿಕ ತಮಿಳು ನಟ ಹಾಗೂ ರಾಜಕಾರಣಿ ಸೀಮನ್ ಅವರ ಜೊತೆ ವಿಜಯಲಕ್ಷ್ಮೀ ಒಡನಾಟ ಇರಿಸಿಕೊಂಡಿದ್ದರು. ಸುಮಾರು ಮೂರು ವರ್ಷ ಜೊತೆಯಾಗಿದ್ದ ಈ ಜೋಡಿ ಬಳಿಕ ಬೇರ್ಪಟ್ಟಿತ್ತು. ಇದೀಗ ತನ್ನ ಆತ್ಮಹತ್ಯೆಯ ನಿರ್ಧಾರಕ್ಕೆ ಸೀಮನ್ ಅವರೇ ಕಾರಣ ಎಂದು ನಟಿ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next