ನನ್ನ ಜೀವನದ ಮುಖ್ಯ ಗುರುಗಳು ಅಂದ್ರೆ ಅದು ನನ್ನ ತಂದೆ ತಾಯಿ. ತಂದೆ ಚೆಟ್ಟಿಚಾ ಅವರು ಬಸ್ ಡ್ರೈವರ್ ಆಗಿದ್ರು, ಬೇರೆ ಊರುಗಳಿಗೆಲ್ಲ ಹೋಗ್ತಿದ್ರು. ಹಾಗಾಗಿ ಹೆಚ್ಚು ಸಮಯ ತಾಯಿಯೊಂದಿಗೆ ಕಳೆದೆ. ನನ್ನ ತಾಯಿ ಕಾವೇರಿ ಅವರಿಂದ ಶಿಸ್ತು ಬಹಳ ಕಲಿತೆ. ನನ್ನ ತಾಯಿಯ ತಂದೆ ಸೈನ್ಯದಲ್ಲಿದ್ದರು. ಹಾಗಾಗಿ ನಮ್ಮ ಮನೆಯಲ್ಲಿ ಶಿಸ್ತಿನ ವಾತಾವರಣ. ತಂದೆ-ತಾಯಿಯಿಂದ ಕಲಿತದ್ದು ಬಹಳಷ್ಟಿದೆ. ಸಿನಿಮಾ ರಂಗಕ್ಕೆ ಬಂದಾಗ ನಾನು ಹೆಚ್ಚು ಪ್ರಭಾವಿತಳಾಗಿದ್ದು ಡಾ. ರಾಜಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಅವರಿಂದ. ಸಿನಿಮಾ ಕ್ಷೇತ್ರದಲ್ಲಿ ಅವರೇ ನನ್ನ ಗುರುಗಳು.
ಅಣ್ಣಾವ್ರ ಆ ಕಾಳಜಿ… “ಸವ್ಯಸಾಚಿ’ ಚಿತ್ರೀಕರಣ ಸಂದರ್ಭದಲ್ಲಿ ಮೊದಲ ಬಾರಿಗೆ ಡಾ. ರಾಜಕುಮಾರ್ ಅವರನ್ನು ಭೇಟಿಯಾಗಿದ್ದೆ. ಅವರನ್ನು ಮಾತನಾಡಿಸಲು ಭಯ ಆಗಿತ್ತು. ಅವರ ವೈಟ್ ಆ್ಯಂಡ್ ವೈಟ್ ಉಡುಗೆ, ಯಾರು ಯಾವ ಚಿತ್ರದಲ್ಲಿ ಬಿಝಿ ಇದಾರೆ ಇದನ್ನೆಲ್ಲ ತಿಳಿದುಕೊಳ್ಳೋದು, ಸೆಟ್‌ಗೆ ಬಂದು ಭೇಟಿಯಾಗೋದು ಇದೆಲ್ಲ ಅವರಿಗೆ ಆಸಕ್ತಿ ಇತ್ತು. ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಹಂಸಲೇಖ ಅವರು “ಓಂ” ಚಿತ್ರದ ಹಾಡಿನ ರೆಕಾರ್ಡಿಂಗ್ ಮಾಡುತ್ತಿದ್ದರು. ಆಗ ಅಣ್ಣಾವ್ರು ಅಲ್ಲಿಗೆ ಬಂದರು. ಅವರು ಬಂದಾಗ ಎಲ್ಲರೂ ಎದ್ದು ನಿಂತ್ವಿ. ಅವರೊಂದಿಗೆ ಯಾವ ಚಿತ್ರದಲ್ಲೂ ನಾನು ನಟಿಸಿಲ್ಲ. ಆದರೆ, ಅವರ ಹಾವ-ಭಾವ, ನಡೆ-ನುಡಿಯಿಂದ ಕಲಿತದ್ದು ಬಹಳ.
“ಸವ್ಯಸಾಚಿ’ ಚಿತ್ರದ ಹಾಡಿನ ಚಿತ್ರೀಕರಣ ನಡೆದಿತ್ತು. ನಾನು ಅಚಾನಕ್ಕಾಗಿ ಕೆಳಗೆ ಬಿದ್ದೆ. ಆಗ ನನ್ನ ತಲೆಗೆ ಪಿನ್ ಚುಚ್ಚಿ ಸಣ್ಣಗೆ ರಕ್ತ ಬಂತು. ಕೂಡಲೇ ಅಣ್ಣಾವ್ರು ಎದ್ದು ಬಂದು “ಏನಾಯ್ತು, ಆಸ್ಪತ್ರೆಗೆ ಹೋಗಬೇಕಾ, ಚೆನ್ನಾಗಿದೀಯಾ?’ ಅಂತೆಲ್ಲ ವಿಚಾರಿಸಿದರು. ಎಲ್ಲರಿಗೂ ಇದೇ ರೀತಿ ಕಾಳಜಿ ತೋರಿಸುತ್ತಿದ್ದರು. “ಓಂ’ ಸಿನಿಮಾ ನೋಡಿದ ಅಣ್ಣಾವ್ರು ಹಾಗೂ ಪಾರ್ವತಮ್ಮನವರು, ಆಗ ನನ್ನ ಬಳಿ ಫೋನ್ ಇರಲಿಲ್ಲ; ನಮ್ಮ ಮನೆ ಹತ್ತಿರದ ಒಂದು ಅಂಗಡಿಗೆ ಫೋನ್ ಮಾಡಿ ನನ್ನ ಜೊತೆ ಮಾತಾಡಿದ್ರು. “ಬಹಳ ಚೆನ್ನಾಗಿ ಮಾಡಿದೀಯಾ’ ಅಂತ ಹೇಳಿದ್ರು. ಅಣ್ಣಾವ್ರು ಈ ಮಾತು ಹೇಳಿದ್ರಲ್ಲ ಅನ್ನೋದೇ ದೊಡ್ಡ ಖುಷಿ ನನಗೆ. ಅಷ್ಟು ಸಾಕಾಗಿತ್ತು, ಅವರ ಹೊಗಳಿಕೆ ನನಗೆ ಅವಾರ್ಡ್ ಕೊಟ್ಟಂಗೆ ಆಗಿತ್ತು.
ಸಹೃದಯಿ ವಿಷ್ಣುವರ್ಧನ್!: ಡಾ. ವಿಷ್ಣುವರ್ಧನ್ ಅವರಿಂದ ಸಮಯ ಪಾಲನೆ, ಶಿಸ್ತು ಕಲಿತೆ. “ಪರ್ವ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಡೇಟ್ ವಿಷಯವಾಗಿ ನನ್ನ ಮತ್ತು ನಿರ್ಮಾಪಕರ ನಡುವೆ ದೊಡ್ಡ ಗಲಾಟೆ ಆಗಿತ್ತು. ಆಗ ವಿಷ್ಣು ಅವರು ಖುದ್ದು ನನ್ನ ಮನೆಗೆ ಬಂದು ನನ್ನನ್ನು ಸಮಾಧಾನ ಮಾಡಿದರು. ಆ ಕಷ್ಟದ ಸಮಯದಲ್ಲಿ ನನಗೆ ಬೆಂಬಲಿಸಿ ಎಂದು ಯಾರಿಗೂ ನಾನು ಕೇಳಿಕೊಂಡಿರಲಿಲ್ಲ. ಆದರೆ, ಒಬ್ಬ ಕಲಾವಿದರ ಬೆಲೆ ಇನ್ನೊಬ್ಬ ಕಲಾವಿದರಿಗೆ ಮಾತ್ರ ಗೊತ್ತಾಗೋದು. ಆ ಸಮಯದಲ್ಲಿ ವಿಷ್ಣು ಅವರು ನನ್ನ ಜೊತೆ ನಿಂತಿದ್ದನ್ನು, ನಾನು ಸಾಯುವವರೆಗೂ ಮರೆಯಲ್ಲ. ಅವರ ಸಹೃದಯ, ಒಳ್ಳೆಯ ಮನಸ್ಸು ಇಷ್ಟ ಆಯ್ತು.
-ಪ್ರೇಮಾ, ನಟಿ