ಸಾಮಾನ್ಯವಾಗಿ ಮೊದಲೆಲ್ಲ ಕಿರುತೆರೆ ಕಲಾವಿದರು, ಹಿರಿತೆರೆಗೆ ಹೋಗಬೇಕು ಅಲ್ಲಿ ಮಿಂಚಬೇಕು ಎನ್ನುವ ಆಲೋಚನೆಯಲ್ಲಿ ಇರುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ, ಹಿರಿತೆರೆಯಷ್ಟೇ ಸ್ಕೋಪ್ ಕಿರುತೆರೆಯಲ್ಲೂ ಇರುವುದರಿಂದ, ಅನೇಕ ಹಿರಿತೆರೆ ಕಲಾವಿದರು ಮತ್ತು ತಂತ್ರಜ್ಞರು ಕೂಡ ಕಿರುತೆರೆಯತ್ತ ಮುಖ ಮಾಡುತ್ತಿದ್ದಾರೆ. ಈಗ ಯಾಕೆ ಈ ವಿಷಯ ಅಂದ್ರೆ, ಕನ್ನಡದ ಅಂಥಾದ್ದೇ ಭರವಸೆಯ ನಟಿಮಣಿಯೊಬ್ಬರು ಚಿತ್ರರಂಗದಲ್ಲಿ ಬ್ಯುಸಿಯಾಗಿರುವಂತೆಯೇ, ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಅಂದಹಾಗೆ, ಆ ನಟಿ ಮೇಘಶ್ರೀ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಮಲೆನಾಡ ಹುಡುಗಿ ಮೇಘಶ್ರೀ ಈಗ ಕಿರುತೆರೆಯತ್ತ ಮುಖ ಮಾಡುತ್ತಿದ್ದಾರೆ.
“ಲೋಕೇಶ್ ಪ್ರೊಡಕ್ಷನ್ಸ್’ ನಲ್ಲಿ ಸೃಜನ್ ಲೋಕೇಶ್ ನಿರ್ಮಿಸುತ್ತಿರುವ, ತೇಜಸ್ವಿ ನಿರ್ದೇಶನದ ಇವಳು ಸುಜಾತಾ ಧಾರಾವಾಹಿಯಲ್ಲಿ ನಟಿ ಮೇಘಶ್ರೀ, ಸುಜಾತಾ ಹೆಸರಿನ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಧಾರಾವಾಹಿಯ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಜುಲೈ ಅಂತ್ಯಕ್ಕೆ ಅಥವಾ ಆಗಸ್ಟ್ ಮೊದಲವಾರದಿಂದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಈ ಬಗ್ಗೆ ಮಾತನಾಡುವ ಮೇಘಶ್ರೀ, “ನಾನೊಬ್ಬಳು ನಟಿಯಾಗಬೇಕು ಎನ್ನುವ ಕನಸಿನಿಂದ ಈ ಕ್ಷೇತ್ರಕ್ಕೆ ಬಂದವಳು. ಕಲಾವಿದೆ ಯಾಗಿ ನನಗೆ ಸಿನಿಮಾ ಅಥವಾ ಸೀರಿಯಲ್ ಎನ್ನುವ ಯಾವುದೇ ಭೇದ-ಭಾವವಿಲ್ಲ. ಎರಡಕ್ಕೂ ಅದರದ್ದೇಯಾದ ಲಿಮಿಟೇಷನ್ಸ್ ಮತ್ತು ಇಂಪಾರ್ಟೆನ್ಸ್ ಇದ್ದೇ ಇರುತ್ತದೆ. ಸಿನಿಮಾ ನೋಡುವ ವರ್ಗವೇ ಬೇರೆ ಇರುತ್ತದೆ, ಸೀರಿಯಲ್ ನೋಡುವ ವರ್ಗವೇ ಬೇರೆ ಇರುತ್ತದೆ. ಇವತ್ತು ಕೆಲವು ಸಿನಿಮಾಗಳಿಗಿಂತ ಸೀರಿಯಲ್‌ಗಳೇ ಹೆಚ್ಚು ಜನರನ್ನು ತಲುಪುತ್ತವೆ. ನನ್ನ ಪ್ರಕಾರ ಒಬ್ಬ ನಟಿಯಾಗಿ ಜನರಿಗೆ ಹತ್ತಿರವಾಗೋದು, ಅವರಿಗೆ ಇಷ್ಟವಾಗೋದು ಮುಖ್ಯ. ಅದಕ್ಕಾಗಿ ಸ್ವಲ್ಪ ಬದಲಾವಣೆ ಇರಲಿ ಅಂತ, ಇವಳು ಸುಜಾತಾ ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಈ ಧಾರಾವಾಹಿಯಲ್ಲಿ ಸುಜಾತಾ ಎಂಬ ಸಾಮಾನ್ಯ ವರ್ಗದ ಹುಡುಗಿಯ ಪಾತ್ರ ನನ್ನದು. ಮಧ್ಯಮ ವರ್ಗದ ಹುಡುಗಿಯ ಜೀವನದ ಕುರಿತಾದ ಭಾವನಾತ್ಮಕ ಕಥೆ ಇದರಲ್ಲಿದ್ದು, ವೀಕ್ಷಕರಿಗೆ ಇಷ್ಟವಾಗುತ್ತದೆ’ ಎನ್ನುವ ಭರವಸೆ ಮೇಘಶ್ರೀ ಅವರದ್ದು.
ಇತ್ತೀಚೆಗೆ ಎಲ್ಲಾ ಭಾಷೆಗಳಲ್ಲೂ ಅಲ್ಲಿನ ಜನಪ್ರಿಯ ಹೀರೋ – ಹೀರೋಯಿನ್ಸ್ ಆಗಾಗ್ಗೆ ಕಿರುತೆರೆಗೆ ಬರುತ್ತಿರುತ್ತಾರೆ. ಸಿನಿಮಾಗಳಿಗೆ ಕಡಿಮೆಯಿಲ್ಲದಂತೆ ಗುಣಮಟ್ಟದಲ್ಲಿ ಇವತ್ತು ಸೀರಿಯಲ್ಸ್ ನಿರ್ಮಾಣವಾಗುತ್ತಿವೆ. ಹಾಗಾಗಿ, ಎರಡಕ್ಕೂ ಅಂಥಾದ್ದೇನೂ ವ್ಯತ್ಯಾಸವಿಲ್ಲ ಎನ್ನುವುದು ಮೇಘಶ್ರೀ ಮಾತು. ಇನ್ನು ಇವಳು ಸುಜಾತಾ ಧಾರಾವಾಹಿಯಲ್ಲಿ ಮೇಘಶ್ರೀ ಅವರೊಂದಿಗೆ ನವನಟ ಯಶವಂತ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಸದ್ಯ ಮೇಘಶ್ರೀ ಅಭಿನಯದ ದಶರಥ, ರಾಜಮಾರ್ತಾಂಡ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿದ್ದು, ರಿದಂ ಚಿತ್ರದ ಚಿತ್ರೀಕರಣ ಇನ್ನೂ ನಡೆಯುತ್ತಿದೆ. ಒಟ್ಟಾರೆ ಸಿನಿಮಾ ಮತ್ತು ಸೀರಿಯಲ್ ಎರಡರಲ್ಲೂ ಸಕ್ರಿಯವಾಗಿರುವ ಮೇಘಶ್ರೀ ಎರಡನ್ನೂ ಹೇಗೆ ಒಟ್ಟಿಗೆ ನಿಭಾಯಿಸಿಕೊಂಡು ಹೋಗುತ್ತಾರೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.