Advertisement

Actress Leelavathi ಲೀನಾ ಸಿಕ್ವೇರಾ ಲೀಲಾವತಿಯಾಗಿ ಸಿನಿ ಲೋಕದ ಪಯಣ

12:51 AM Dec 09, 2023 | Team Udayavani |

ಬೆಳ್ತಂಗಡಿ: ಸಿನಿ ಲೋಕದಲ್ಲಿ ಛಾಪು ಮೂಡಿಸಿದ ಲೀಲಾವತಿ ಜರ್ನಿ ರೋಚಕವಾದುದು. ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮುರದಲ್ಲಿ ಜನಿಸಿದ ಲೀನಾ ಸಿಕ್ವೇರಾ ಅವರೇ ಇಂದು ಲೀಲಾವತಿಯಾಗಿ ಕನ್ನಡ ಸಿನೆಮಾ ಲೋಕದಲ್ಲಿ ಮೇರು ನಟಿಯಾಗಿ ಮೆರೆದವರು.

Advertisement

ಲೀಲಾವತಿಯವರ ಮೂಲ ಹೆಸರು ಲೀನಾ ಸಿಕ್ವೇರಾ. ಅವರ ಸಹೋದರಿ ಅಂಜಲಿನಾ ಸಿಕ್ವೇರಾ. ಬಾಲ್ಯದಲ್ಲೇ ತಂದೆಯನ್ನು ಕಳೆದು ಕೊಂಡ ಅವರನ್ನು ದೊಡ್ಡಪ್ಪನ ಮಗಳಾದ ಲೂಸಿ ಸಿಕ್ವೇರಾ ಸಹೋದರಿ ಲೀನಾ ಮತ್ತು ಅಂಜಲಿನಾ ಅವರನ್ನು ಸಲಹುತ್ತಿದ್ದರು. ಬಾಲ್ಯದಲ್ಲೇ ಬಹ ಳಷ್ಟು ಚುರುಕು ಹಾಗೂ ಉತ್ತಮ ನೃತ್ಯ ಪಟುವಾಗಿದ್ದ ಸಹೋದರಿಯರು ಜೀವನೋ ಪಾಯಕ್ಕಾಗಿ ನೃತ್ಯ ತರಬೇತಿ ನೀಡುತ್ತಿದ್ದರಂತೆ. ಲೀನಾ ಯಾನೆ ಲೀಲಾವತಿಗೆ ಎಲ್ಲು, ಲಿಲ್ಲಿ ಎಂಬ ಉಪನಾಮವೂ ಇದೆ ಎಂಬುದು ಅವರ ಜತೆಗೆ ಬಾಲ್ಯ ಕಳೆದ ನಾವೂರಿನ ಅಣ್ಣಿ ಮೂಲ್ಯ ಮತ್ತು ಕರ್ಮಿನಾ ಡಿ’ಸಿಲ್ವಾ ಹೇಳುತ್ತಾರೆ.

ಅಂದು ಮುರ ಮನೆಯಿಂದ 100 ಮೀಟರ್‌ ದೂರದ ನಾಲ್ಕನೇ ತರಗತಿವರೆಗಿದ್ದ ಸರಕಾರಿ ಶಾಲೆಯಲ್ಲೇ ಅವರ ಬಾಲ್ಯದ ವಿದ್ಯಾಭ್ಯಾಸ ಪೂರ್ಣಗೊಂಡಿತ್ತು. ಲಾೖಲದಿಂದ ಕಾಜೂರು ಕೊಲ್ಲಿ ಸಾಗುವ ಹೆದ್ದಾರಿ ಬದಿಯಲ್ಲಿದ್ದ ಮುಳಿಹುಲ್ಲಿನ ಮನೆಯಲ್ಲಿ ಅಕ್ಕ ತಂಗಿ ವಾಸವಾಗಿದ್ದರು. ಆರಂಭದಲ್ಲಿ ಬೆಳ್ತಂಗಡಿ ಚರ್ಚ್‌ಗೆ ತೆರಳುತ್ತಿದ್ದ ಅವರು 1955ರಲ್ಲಿ ಇಂದ ಬೆಟ್ಟು ಚರ್ಚ್‌ ನಿರ್ಮಾಣವಾದ ಬಳಿಕ ಅಲ್ಲಿಗೇ ಹೋಗುತ್ತಿದ್ದರು. ಬಾಲ್ಯದಿಂದಲೇ ಬಹಳಷ್ಟು ಚುರುಕುತನದ ಸಹೋದರಿಯರನ್ನು ಕಂಡು ಅಲ್ಲಿನ ಮುಸಲ್ಮಾನರೊಬ್ಬರು ಅವರನ್ನು 1963ರಲ್ಲಿ ಮಂಗಳೂರಿನ ಪಡೀಲಿಗೆ ಕಳುಹಿಸಿದ್ದರು. ಅಂದು ಲೀನಾ ಸಿಕ್ವೇರಾ ಯಾನೆ ಲೀಲಾವತಿ ಅವರಿಗೆ 16-17ರ ಹರೆಯ. ಅದಾ ದ ಬಳಿಕ ಹುಟ್ಟೂರಿಗೂ ಅವರಿಗೂ ಸಂಪರ್ಕ ಅಷ್ಟ ಕ್ಕಷ್ಟೆ. ಮತ್ತೆ ಅವರು ಪ್ರವೇಶಿಸಿದ್ದು ಸಿಲಿಕಾನ್‌ ಸಿಟಿಗೆ. ಮತ್ತೆ ಸಿನೆಮಾದಲ್ಲಿ ಸಾಧನೆ ಎಲ್ಲರಿಗೂ ಚಿರಪರಿಚಿತ.

ಇವರ ಸಹೋದರಿ ಅಂಜಲಿನಾ ಸಿಕ್ವೆರಾ ವೃತ್ತಿಯಲ್ಲಿ ಶಿಕ್ಷಕಿ. ಅವರು ಈ ಹಿಂದೆಯೇ ಮೃತಪಟ್ಟಿದ್ದಾರೆ. ಇವರ ದೊಡ್ಡಪ್ಪನ ಮಗಳು (ಸಹೋದರಿ) ಲೂಸಿ ಸಿಕ್ವೇರಾ (93) ವೇಣೂರಿನ ನಿಟ್ಟಡೆ ಗ್ರಾಮದ ಬೆರ್ಕಳದಲ್ಲಿ ವಾಸವಾಗಿದ್ದಾರೆ. ಅವರಿಗೆ 8 ಮಕ್ಕಳು. ಅವರೇ ಲೀಲಾ ವತಿಯನ್ನು ಕೂಡುಕುಟುಂಬವಿದ್ದಾಗ ಬಾಲ್ಯದಲ್ಲಿ ಸಲಹಿದವರು. ಆದರೆ ಲೀಲಾವತಿ ಅವರು ಊರಿಂದ ದೂರವಾದ ಬಳಿಕ ಲೂಸಿ ಯವರು ಮುರದಲ್ಲಿದ್ದ ತಮ್ಮ ಮನೆ ಮಾರಾಟ ಮಾಡಿ ವೇಣೂರಿಗೆ ತೆರಳಿದ್ದಾರೆ.

ಲೀಲಾವತಿ ಯವರು ವಾಸಿಸಿದ್ದ ನಾವೂರಿನ ಮುರದಲ್ಲಿದ್ದ ಮನೆ ಮಾರಾಟವಾದ ಬಳಿಕ ಪ್ರಸಕ್ತ ಮುಸಲ್ಮಾನ ಕುಟುಂಬವೊಂದು ಖರೀದಿಸಿ ವಾಸಿಸುತ್ತಿದೆ. ಬಾಲ್ಯದಲ್ಲೇ ತಂದೆಯನ್ನು ಕಳೆದಕೊಂಡಿದ್ದ ಲೀಲಾವತಿ ಸಹೋದರಿಯರಿಗೆ ಲೂಸಿ ಸಿಕ್ವೇರಾ ಅವರೇ ಆಸರೆಯಾಗಿದ್ದರು. ಕಳೆದ 25 ವರ್ಷಗಳ ಹಿಂದೆ ಪುತ್ರ ವಿನೋದ್‌ ರಾಜ್‌ ಜತೆಗೆ ಲೀಲಾವತಿ ನಾವೂರಿಗೆ ಬಂದು ಮನೆ ತೆರಿಗೆ ಕಟ್ಟಿ, ಸುತ್ತ ಮುತ್ತ ಮನೆಮಂದಿಯೊಂದಿಗೆ ಸಮಯ ಕಳೆದಿ ದ್ದರಂತೆ. ಇವರ ಕುಟುಂಬದ ಸದಸ್ಯರು ಬೆಳ್ತಂ ಗಡಿ ಚರ್ಚ್‌ಗೆ ಹೋಗುತ್ತಿದ್ದರು ಎಂಬ ಬಗ್ಗೆ ಮಾಹಿತಿಗಳು ಇವೆ.

Advertisement

ಕ್ರೈಸ್ತ ಧರ್ಮದಲ್ಲಿದ್ದ ಲೀನಾ ಸಿಕ್ವೇರಾ ಲೀಲಾವತಿಯಾಗಿ ಸಿನಿ ಲೋಕದ ಪಯಣದಲ್ಲಿ ಅಚ್ಚಳಿಯದ ಸಾಧನೆ ತೋರಿ ರುವುದು ಬೆಳ್ತಂಗಡಿ ತಾಲೂಕಿಗೆ ಗರಿಮೆ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next