Advertisement

ಬೆಳ್ತಂಗಡಿ ಟು ಸ್ಯಾಂಡಲ್‌ ವುಡ್:‌ ಮನೆ ಕೆಲಸದಲ್ಲಿದ್ದಾಕೆ ಖ್ಯಾತ ನಟಿಯಾಗಿ ಮಿಂಚಿದ ಲೀಲಾವತಿ

07:08 PM Dec 08, 2023 | Team Udayavani |

ಬೆಂಗಳೂರು: ಚಂದನವನದ ಹಿರಿಯ ನಟಿ ಲೀಲಾವತಿ (85) ವಯೋಸಹಜ ಅನಾರೋಗ್ಯದಿಂದ ಶುಕ್ರವಾರ(ಡಿ.8 ರಂದು) ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಚಂದನವನ ಕಂಬನಿ ಮಿಡಿದಿದೆ.

Advertisement

ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ 1937 ರಲ್ಲಿ ಜನಿಸಿದ ಅವರು, ಬಾಲ್ಯದಲ್ಲೇ ನಾಟಕ ಹಾಗೂ ರಂಗಭೂಮಿಯಲ್ಲಿ ಆಸಕ್ತಿಯನ್ನು ಹೊಂದಿದ್ದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಅವರು, ಹಲವಾರು ನಾಟಕದಲ್ಲಿ ನಟಿಸಿದ್ದರು.ಇದಾದ ಬಳಿಕ ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡ ಅಭಿನಯಿಸಿದರು.

ಸಿನಿರಂಗದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವ ಮುನ್ನ ಅವರು ಮನೆ ಕೆಲಸಕ್ಕೂ ಹೋಗುತ್ತಿದ್ದರು. ಆ ಮೂಲಕ ದಿನ ಸಾಗಿಸುತ್ತಿದ್ದರು.

ಅರಮನೆ ನಗರಿ ಮೈಸೂರಿನಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಲೀಲಾವತಿ 1949 ರಲ್ಲಿ ಬಂದ ಶಂಕರ್‌ ಸಿಂಗ್ ನಿರ್ಮಾಣದ  ʼನಾಗಕನ್ನಿಕೆʼ ಸಿನಿಮಾದಲ್ಲಿ ʼಸಖಿʼ ಎನ್ನುವ ಪಾತ್ರವನ್ನು ಮಾಡುವ ಮೂಲಕ ಚಂದನವನಕ್ಕೆ ಪ್ರವೇಶಿಸಿದರು.

1958 ರಲ್ಲಿ ಬಂದ ʼಮಾಂಗಲ್ಯ ಯೋಗ’ ಸಿನಿಮಾದಲ್ಲಿ ಮೊದಲು ನಾಯಕಿಯಾಗಿ ಕಾಣಿಸಿಕೊಂಡರು. ʼರಣಧೀರ ಕಂಠೀರವʼ ಸಿನಿಮಾದಲ್ಲಿ ಡಾ.ರಾಜ್‌ ಕುಮಾರ್‌ ಅವರೊಂದಿಗೆ ನಾಯಕಿಯಾಗಿ ಮೊದಲ ಬಾರಿ ಕಾಣಿಸಿಕೊಂಡರು. ಈ ಸಿನಿಮಾದ ಮೂಲಕ ರಾಜ್‌ ಕುಮಾರ್‌ – ಲೀಲಾವತಿ ಜೋಡಿ ಜನಪ್ರಿಯವಾಯಿತು.

Advertisement

ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಇನ್ನಷ್ಟು  ಜನಪ್ರಿಯವಾಯಿತು. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ರಾಜ್‌ ಕುಮಾರ್‌ ಜತೆ ಲೀಲಾವತಿ ಸಾಲು ಸಾಲು ಸಿನಿಮಾದಲ್ಲಿ ಕಾಣಿಸಿಕೊಂಡರು.

ನಟಿಸಿದ ಪ್ರಮುಖ ಸಿನಿಮಾಗಳು:

ಭಕ್ತ ಪ್ರಹ್ಲಾದ, ಮಾಂಗಲ್ಯ ಯೋಗ, ರಾಜ ಮಲಯ ಸಿಂಹ, ಅಬ್ಬಾ ಆ ಹುಡುಗಿ, ಧರ್ಮ ವಿಜಯ, ದಶವತಾರ, ರಣಧೀರ ಕಂಠೀರವ, ರಾಣಿ ಹೊನ್ನಮ್ಮ, ಕೈವಾರ ಮಹಾತ್ಮೆ, ಕಣ್ತೆರೆದು ನೋಡು, ಕಿತ್ತೂರು ಚೆನ್ನಮ್ಮ, ಗಾಳಿ ಗೋಪುರ, ಕರುಣೆಯೇ ಕುಟುಂಬದ ಕಣ್ಣು, ಭೂದಾನ, ಮನ ಮೆಚ್ಚಿದ ಮಡದಿ, ನಂದಾ ದೀಪಾ, ಪಟ್ಟಿನಥರ್‌ (ತಮಿಳು), ರಾಣಿ ಚೆನ್ನಮ್ಮ, ರತ್ನ ಮಂಜರಿ, ಸುಮತಾಂಗಿ (ತಮಿಳು, ವಲರ್‌ ಪಿರಾಯಿ (ತಮಿಳು), ವಿಧಿ ವಿಲಾಸ, ಕುಲವಧು, ಕನ್ಯಾರತ್ನ, ಕಲಿತರೂ ಹೆಣ್ಣೇ, ಬೇವು ಬೆಲ್ಲ, ಜೀವನ ತರಂಗ, ಮಲ್ಲಿ ಮದುವೆ, ಮನ ಮೆಚ್ಚಿದ ಮಡದಿ, ಸಂತ ತುಕರಾಮ, ವಾಲ್ಮಿಕಿ, ವೀರ ಕೇಸರಿ, ಮರ್ಮಯೋಗಿ (ತೆಲುಗು), ಶಿವರಾತ್ರಿ ಮಹಾತ್ಮೆ, ತುಂಬಿದ ಕೊಡ, ಚಂದ್ರಹಾಸ, ಇದೇ ಮಹಾಸುದಿನ, ಮದುವೆ ಮಾಡಿ ನೋಡು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಡಾ.ರಾಜ್‌ ಕುಮಾರ್‌,, ಅನಂತ್‌ ನಾಗ್‌, ಶಂಕರ್‌ ನಾಗ್ ,ವಿಷ್ಣುವರ್ಧನ್‌, ಅಂಬರೀಷ್‌, ಪ್ರಭಾಕರ್‌ ಸೇರಿದಂತೆ ಕನ್ನಡದ ಪ್ರಮುಖ ಕಲಾವಿದರೊಂದಿಗೆ ಅವರು ನಟಿಸಿದ್ದರು.

ಕನ್ನಡ, ತಮಿಳು, ತೆಲುಗು  ಮಲಯಾಳಂ ಹಾಗೂ ತುಳು ಸೇರಿ ಪಂಚ ಭಾಷೆಯ ಸಿನಿರಂಗದಲ್ಲಿ 600ಕ್ಕೂ ಹೆಚ್ಚಿನ ಸಿನಿಮಾದಲ್ಲಿ ಅವರು ನಟಿಸಿದ ಲೀಲಾವತಿ ಅವರಿಗೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿದೆ.

‘ಮದುವೆ ಮಾಡಿನೋಡು’ ಮತ್ತು ‘ಸಂತ ತುಕಾರಾಮ್​’ ಸಿನಿಮಾಗಳಲ್ಲಿನ ಅಭಿನಯಕ್ಕಾಗಿ ಅವರಿಗೆ ಎರಡು ರಾಷ್ಟ್ರ ಪ್ರಶಸ್ತಿಗಳು ಸಿಕ್ಕಿವೆ. ‘ತುಂಬಿದ ಕೊಡ’, ‘ಮಹಾತ್ಯಾಗ’, ‘ಭಕ್ತ ಕುಂಬಾರ’, ‘ಸಿಪಾಯಿ ರಾಮು’, ‘ಗೆಜ್ಜೆ ಪೂಜೆ’ ಸಿನಿಮಾಗಳಲ್ಲಿನ ಅವರ ನಟನೆಗೆ ರಾಜ್ಯ ಪ್ರಶಸ್ತಿಗಳು ಸಂದಿವೆ. ‘ಕನ್ನಡದ ಕಂದ’ ಚಿತ್ರಕ್ಕೆ ಫಿಲ್ಮ್ ಫೇರ್​ ಪ್ರಶಸ್ತಿ ಕೂಡ ಸಿಕ್ಕಿತ್ತು. ಜೀವಮಾನ ಸಾಧನೆಗಾಗಿ ಲೀಲಾವತಿ ಅವರು 1999 -2000 ರ ಸಾಲಿನ ‘ಡಾ. ರಾಜ್​ಕುಮಾರ್​ ಪ್ರಶಸ್ತಿ’ ಪಡೆದರು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಅವರಿಗೆ ಗೌರವ ಡಾಕ್ಟರೇಟ್​ ನೀಡಲಾಗಿತ್ತು.

ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದ ಲೀಲಾವತಿ:  ಲೀಲಾವತಿ ಸ್ಟಾರ್‌ ನಟಿಯಾಗಿ ಮಾತ್ರವಲ್ಲದೆ, ‘ಅಷ್ಟಲಕ್ಷ್ಮೀ ಕಂಬೈನ್ಸ್​’, ‘ಲೀಲಾವತಿ ಕಂಬೈನ್ಸ್​’ ಸಂಸ್ಥೆಗಳ ಮೂಲಕ 5 ಸಿನಿಮಾಗಳನ್ನು ಅವರು ನಿರ್ಮಿಸಿದ್ದರು.

ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟರಾಗಿದ್ದಾರೆ. ತಾಯಿ-ಮಗ ಇಬ್ಬರೂ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ಇತ್ತೀಚೆಗೆ ಲೀಲಾವತಿ ಅವರ ಕನಸಿನ ಪಶು ಆಸ್ಪತ್ರೆಯನ್ನು ಡಿಸಿಎಂ ಡಿಕೆ ಶಿವಕುಮಾರ್‌ ಅವರು ಉದ್ಘಾಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next