ಬೆಂಗಳೂರು: ಇತ್ತೀಚೆಗೆ ಪುಲಕೇಶಿನಗರದಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಹಲ್ಲೆಗೆ ಯತ್ನಿಸಿದ ಸಂಬಂಧ ದಂಪತಿ ಕಿಡಿಗೇಡಿಗಳ ವಿರುದ್ಧ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರಿಗೆ ದೂರು ನೀಡಿದ್ದಾರೆ.
ಶನಿವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾರನ್ನು ಭೇಟಿಯಾದ ದಂಪತಿ ಘಟನೆ ಬಗ್ಗೆ ಚರ್ಚಿಸಿ ಬಳಿಕ ಕಿಡಿಗೇಡಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಭುವನ್, ಪೊಲೀಸ್ ಕಮಿಷನರ್ ಇಲ್ಲದ ಕಾರಣ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತರನ್ನು ಭೇಟಿಯಾಗಿ ದೂರು ನೀಡಿದ್ದೇವೆ. ಎಫ್ಐಆರ್ ದಾಖಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಘಟನೆ ನಡೆದಾಗ ದೂರು ಕೊಡುವುದರಿಂದ ಬೇರೆ ರೂಪ ಪಡೆದುಕೊಳ್ಳಲಿದೆ ಎಂಬ ಕಾರಣಕ್ಕಾಗಿ ದೂರು ಕೊಟ್ಟಿರಲಿಲ್ಲ. ಈ ಬಗ್ಗೆ ಸಂಬಂಧಿಕರು ಹಾಗೂ ಹಿತೈಷಿಗಳು ನೀಡಿದ ಸಲಹೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ದೂರು ಕೊಡಲಾಗಿದೆ ಎಂದು ವಿವರಿಸಿದರು.
ಬಳಿಕ ನಟಿ ಹರ್ಷಿಕಾ ಪೂರ್ಣಚ್ಚ ಮಾತನಾಡಿ, ತಮಗಾಗಿರುವ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ದೂರಿನ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಇಲ್ಲಿ ಹುಟ್ಟಿ ಬೆಳೆದ ನಾನು ಕನ್ನಡ ಮಾತನಾಡಬಾರದೆ ಎಂದು ಅಸಮಾಧಾನದಲ್ಲಿ ಪಾಕಿಸ್ಥಾನದಲ್ಲಿ ಇದ್ದೇವಾ ಎಂಬ ರೀತಿಯಲ್ಲಿ ಪೋಸ್ಟ್ ಮಾಡಿದ್ದೇ ಹೊರತು ಬೆಂಗಳೂರು ಹಾಗೂ ಇಲ್ಲಿನ ಕಾನೂನು ಸುವ್ಯವಸ್ಥೆ ದೂಷಿಸಿಲ್ಲ ಎಂದು ಸ್ಪಷ್ಟಪಡಿಸಿದರು.