ಕೋಲಾರ : ಭಾನುವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕೊಟ್ಟೂರು ಅವರ ವಿವಾಹ ವಿಚಾರ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ನಿನ್ನೆ (ಮಾರ್ಚ್ 28) ಬೆಂಗಳೂರಿನ ಬ್ಯಾಟರಾಯನಪುರದ ಗಣೇಶ ದೇವಸ್ಥಾನದಲ್ಲಿ ಬೆಳಿಗ್ಗೆಯಷ್ಟೇ ರಿಯಲ್ ಎಸ್ಟೇಟ್ ಉದ್ಯಮಿ ನಾಗಾರ್ಜುನ್ ಹಾಗೂ ಚೈತ್ರಾ ಅವರ ವಿವಾಹ ನಡೆಯಿತು. ಆದರೆ, ಹಸೆಮಣೆ ಏರಿದ ದಿನವೇ ಕೋಲಾರಕ್ಕೆ ಬಂದ ನವ ದಂಪತಿಯು ಸಂಜೆ ವೇಳೆಗೆ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮದುವೆ ಇಷ್ಟವಿರಲಿಲ್ಲ :
ನಾಗಾರ್ಜುನ್ ಹಾಗೂ ಚೈತ್ರಾ ಪ್ರೀತಿಸುತ್ತಿದ್ದರು. ಪರಸ್ಪರ ಒಪ್ಪಿಗೆಯ ಮೂಲಕವೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಮದುವೆ ನಂತರ ನಾಗಾರ್ಜುನ್ ಉಲ್ಟಾ ಹೊಡೆದಿದ್ದಾರೆ. ‘ನನಗೆ ಚೈತ್ರಾ ಅವರನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ, ಕೆಲ ಸಂಘಟನೆಗಳ ಸದಸ್ಯರು ನನ್ನನ್ನು ಗೃಹ ಬಂಧನದಲ್ಲಿಟ್ಟು ಬೆದರಿಸಿ ಬಲವಂತವಾಗಿ ಅವರೊಂದಿಗೆ ಮದುವೆ ಮಾಡಿಸಿದ್ದಾರೆ’ ಎಂದು ನಾಗಾರ್ಜುನ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಇತ್ತ ಚೈತ್ರಾ ಕೂಡಾ ‘ನಾನು ಮತ್ತು ನಾಗಾರ್ಜುನ್ ಹಲವು ವರ್ಷಗಳಿಂದ ಪರಿಚಿತರು. ಪರಸ್ಪರರು ಪ್ರೀತಿಸಿ ಮದುವೆಯಾಗಿದ್ದೇವೆ. ನಾಗಾರ್ಜುನ್ ನನಗೆ ತುಂಬಾ ಇಷ್ಟ. ನಾನು ಅವರೊಂದಿಗೆ ಬದುಕುತ್ತೇನೆ’ಎಂದು ಪೊಲೀಸರಿಗೆ ತಿಳಿಸಿದ್ದಾರೆ.