ನಿಜಕ್ಕೂ ಆಕೆ ಸಕಲೇಶಪುರದ ಹುಡುಗಿ. ಕರಾವಳಿಯ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಊರು. ಕನ್ನಡದಲ್ಲಿಯೇ ವ್ಯವಹಾರ ನಡೆಯುವ ಜಾಗವದು. ಆದರೆ, ಅಲ್ಲಿಂದ ಕರಾವಳಿಗೆ ಬಂದ ಕೃಷ್ಣ ಸುಂದರಿಯೊಬ್ಬರು ಕೋಸ್ಟಲ್‌ವುಡ್‌ನಲ್ಲಿ ಹೊಸ ಮನ್ವಂತರ ದಾಖಲಿಸಿದ್ದಾರೆ!
ಇದೊಂದು ಆಶ್ಚರ್ಯ ಹಾಗೂ ಕುತೂಹಲದ ಸಂಗತಿ. ಕನ್ನಡ ರಂಗಭೂಮಿ ‘ನೀನಾಸಂ’ನಲ್ಲಿ ತೊಡಗಿಸಿಕೊಂಡ ಕಲಾವಿದೆ ಇದೀಗ ಕೋಸ್ಟಲ್‌ವುಡ್‌ನಲ್ಲಿ ಸಾಲು ಸಾಲು ಸಿನೆಮಾಗಳ ಮೂಲಕ ಮಾಯಾಜಾದು ಮಾಡಲು ರೆಡಿಯಾಗಿದ್ದಾರೆ. ಆಕೆಯ ಹೆಸರು ಬಿಂದೂ ರಕ್ಷಿದಿ.
ರಾಷ್ಟ್ರಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಮಾನ್ಯತೆಯನ್ನು ತುಳುವಿಗೆ ನೀಡಿದ ಖ್ಯಾತ ನಿರ್ದೇಶಕ ಅಭಯ ಸಿಂಹ ಅವರ ‘ಪಡ್ಡಾಯಿ’ ಸಿನೆಮಾದ ಮೂಲಕ ಬಿಂದು ಕೋಸ್ಟಲ್‌ವುಡ್‌ನಲ್ಲಿ ಎಂಟ್ರಿ ಪಡೆದು ತನ್ನ ಅಭಿನಯ ಚಾತುರ್ಯದಿಂದ ಫೇಮಸ್ ಆದರು. ವಿಶೇಷವೆಂದರೆ ಈ ಹಿಂದೆ ತುಳುವಿಗೆ ರಾಷ್ಟ್ರಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಗೌರವ ದೊರಕಿಸಿಕೊಟ್ಟ ಇನ್ನೊಬ್ಬ ಖ್ಯಾತ ನಿರ್ದೇಶಕ ಚೇತನ್ ಮುಂಡಾಡಿ ಅವರ ನಿರ್ದೇಶನದ ಇನ್ನಷ್ಟೇ ತೆರೆಕಾಣಬೇಕಾದ ‘ಪ್ರವೇಶ’ದ ಮೂಲಕ ಮತ್ತೆ ಬಿಂದು ಹೊಸ ಮುಖದೊಂದಿಗೆ ಕೋಸ್ಟಲ್ ವುಡ್‌ನಲ್ಲಿ ಸಾಧನೆಯ ಗೆರೆ ದಾಖಲಿಸಲು ಮುಂದಾಗಿದ್ದಾರೆ. ಜತೆಗೆ ಕನ್ನಡದಲ್ಲಿ ‘ಉತ್ತಮರು’ ಎಂಬ ಸಿನೆಮಾದಲ್ಲಿಯೂ ಬಣ್ಣಹಚ್ಚಿರುವ ಬಿಂದು ಇನ್ನೂ ಕೆಲವು ತುಳು/ಕನ್ನಡ ಸಿನೆಮಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಅಂದಹಾಗೆ, ‘ಪ್ರವೇಶ’ ಸಿನೆಮಾದಲ್ಲಿ ಬಿಂದು ಅವರು ಕುಮ್ಮಿ ಎಂಬ ನಾಟಿ ವೈದ್ಯೆಯ ಪಾತ್ರ ನಿರ್ವಹಿಸಿದ್ದಾರೆ. ಹಳ್ಳಿಯಲ್ಲಿದ್ದುಕೊಂಡು ಸಿಟಿಯ ಕನಸು ಕಾಣುವ, ಸಿಟಿಯ ಜೀವನದಿಂದ ಬೇಸತ್ತು ಹಳ್ಳಿಯೇ ಚೆಂದ ಎಂದು ಹುಟ್ಟಿದ ಊರಿಗೆ ವಾಪಸಾಗಿರುವ ಎರಡು ಭಿನ್ನ ವ್ಯಕ್ತಿತ್ವಗಳನ್ನು ಮುಖಾಮುಖಿಯಾಗುವ ನೆಲೆಯಲ್ಲಿ ಈ ಪಾತ್ರ ಬಿಂಬಿತವಾಗಿದೆ. ತುಂಟ ಹಾಗೂ ಕೋಮಲ ನಗುವಿನೊಂದಿಗೆ ಪ್ರೇಕ್ಷಕರನ್ನು ಕಚಗುಳಿಯಿಡುವ ಬಿಂದು ಕೋಸ್ಟಲ್‌ವುಡ್‌ನಲ್ಲಿ ಸ್ಟಾರ್ ನಟಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.