ನವದೆಹಲಿ: ಮಾಜೀ ಸಂಸದೆ ಮತ್ತು ಕಾಂಗ್ರೆಸ್ ನಾಯಕಿ ರಮ್ಯಾ ಅವರು ಮತ್ತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಮತ್ತೆ ‘ಭಾರತೀಯ ಜೂಟಿ ಪಾರ್ಟಿ’ (ಭಾರತೀಯ ಸುಳ್ಳಿನ ಪಕ್ಷ) ಎಂದು ಕಾಳೆಲೆದಿದ್ದಾರೆ. ಫೆಬ್ರವರಿ 13ರಂದು ತಮ್ಮ ಅಧಿಕೃತ ಟ್ವಿಟರ್ ಅಕೌಂಟ್ ನಲ್ಲಿ ಒಂದು ಚೀನೀ ಟಿಕ್ ಟಾಕ್ ತಮಾಷೆ ವಿಡಿಯೋ ಒಂದನ್ನು ಪೋಸ್ಟ್ ಮಾಡಿ, ‘ಭಾರತೀಯ ಸುಳ್ಳಿನ ಪಕ್ಷ’ದ ಭರವಸೆಗಳು ಇದೇ ರೀತಿಯದ್ದಾಗಿವೆ ಎಂದು ಕೇಂದ್ರ ಸರಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಡಿಯೋದಲ್ಲೇನಿದೆ?
ಇದೊಂದು ತಮಾಷೆ ವಿಡಿಯೋ ಆಗಿದ್ದು. ಇದರಲ್ಲಿ ತರುಣಿಯೊಬ್ಬಳು ಪ್ಲಾಸ್ಟಿಕ್ ಸ್ಟೂಲ್ ಒಂದನ್ನು ತನ್ನ ತಲೆ ಮೇಲಿರಿಸಿಕೊಂಡಿರುತ್ತಾಳೆ. ಕೆಮರಾ ಕ್ಲೋಸಪ್ ನಲ್ಲಿ ನೋಡಿದಾಗ ಆಕೆ ವಿಮಾನದ ಕಿಟಕಿಯಿಂದ ಹೊರಭಾಗವನ್ನು ನೋಡುತ್ತಿರುವಂತೆ ಭಾಸವಾಗುತ್ತದೆ. ಬಳಿಕ ನಿಧಾನವಾಗಿ ಕೆಮರಾ ಲಾಂಗ್ ಶಾಟ್ ಗೆ ಹೋಗುತ್ತಿದ್ದಂತೆ ಆಕೆ ಹಿಡಿದಿರುವುದು ಪ್ಲಾಸ್ಟಿಕ್ ಸ್ಟೂಲು ಎಂಬುದು ನೋಡುಗರಿಗೆ ತಿಳಿಯುತ್ತದೆ. ಇದೇ ಸನ್ನಿವೇಶವನ್ನು ರಮ್ಯಾ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಜನರಿಗೆ ನೀಡಿರುವ ಭರವಸೆಗಳಿಗೆ ಹೋಲಿಕೆ ಮಾಡಿ ಆ ಮೂಲಕ ಈ ಕೇಂದ್ರ ಸರಕಾರವು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಅರ್ಥದಲ್ಲಿ ‘ಭಾರತೀಯ ಜೂಟಿ ಪಾರ್ಟೀಸ್ ಪ್ರಾಮಿಸಸ್ ಬಿ ಲೈಕ್..’ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಈ ಟ್ವೀಟ್ ಅನ್ನು ರಮ್ಯಾ ಅವರು ಪ್ರಧಾನಮಂತ್ರಿಯವರ ಅಧಿಕೃತ ಟ್ವಿಟರ್ ಖಾತೆಗೆ ಮತ್ತು BJP4Inda ಅಕೌಂಟ್ ಗೆ ಟ್ಯಾಗ್ ಮಾಡಿದ್ದಾರೆ. ರಮ್ಯಾ ಅವರ ಈ ಪೋಸ್ಟ್ ಗೆ ಟ್ವೀಟರಿಗರು ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ.