ಹೈದರಾಬಾದ್: ಪೊಲೀಸ್ ಟಾಸ್ಕ್ ಫೋರ್ಸ್ ತಂಡವು ಭಾನುವಾರ ಮುಂಜಾನೆ ಬಂಜಾರಾ ಹಿಲ್ಸ್ ನ ಪಂಚತಾರಾ ಹೋಟೆಲ್ ನ ಪಬ್‌ನಲ್ಲಿ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ವಿಐಪಿಗಳು, ನಟರು ಮತ್ತು ರಾಜಕಾರಣಿಗಳ ಮಕ್ಕಳು ಸೇರಿದಂತೆ ಸುಮಾರು 142 ಜನರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಕೊಕೇನ್ ನಂತಹ ನಿಷೇಧಿತ ಪದಾರ್ಥಗಳನ್ನು ದಾಳಿಯ ವೇಳೆ ಪತ್ತೆ ಮಾಡಲಾಗಿದೆ ಎಂದು ವರದಿಯಾಗಿದೆ.
ಬಂಧಿತರಲ್ಲಿ ನಟ ನಾಗಬಾಬು ಅವರ ಪುತ್ರಿ, ಮೆಗಾಸ್ಟಾರ್ ಚಿರಂಜೀವಿ ಅವರ ಸೊಸೆಯೂ ಆಗಿರುವ ನಿಹಾರಿಕಾ ಕೊನಿಡೇಲಾ ಕೂಡ ಸೇರಿದ್ದಾರೆ. ನಂತರ ನಾಗಬಾಬು ವಿಡಿಯೋ ಬಿಡುಗಡೆ ಮಾಡಿ ತಮ್ಮ ಮಗಳಿಗೆ ಡ್ರಗ್ಸ್ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಬಂಧಿತವರಲ್ಲಿ ಗಾಯಕ ಮತ್ತು ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋ ವಿಜೇತ ರಾಹುಲ್ ಸಿಪ್ಲಿಗುಂಜ್ ಕೂಡ ಸೇರಿದ್ದಾರೆ. ಫೆಬ್ರವರಿ 12 ರಂದು ಹೈದರಾಬಾದ್ ಪೊಲೀಸರು ಡ್ರಗ್ಸ್ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದಾಗ ರಾಹುಲ್ ಥೀಮ್ ಹಾಡನ್ನು ಹಾಡಿದ್ದರು. ಆದರೆ ಅವರೇ ಈಗ ಡ್ರಗ್ಸ್ ಕೇಸ್ ನಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.
ಇದನ್ನೂ ಓದಿ:ಉಗ್ರರ ಅಡಗುತಾಣದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಸೇನೆ
ಪಾರ್ಟಿಯಲ್ಲಿದ್ದ ಇತರರಲ್ಲಿ ಆಂಧ್ರಪ್ರದೇಶದ ಉನ್ನತ ಪೋಲೀಸರೊಬ್ಬರ ಮಗಳು ಮತ್ತು ರಾಜ್ಯದ ತೆಲುಗು ದೇಶಂ ಸಂಸದರ ಮಗ ಕೂಡ ಇದ್ದರು. “ತನ್ನ ಮಗ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದಾನ, ಆದರೆ ಸುಳ್ಳು ಆರೋಪ ಮಾಡಲಾಗುತ್ತಿದೆ. ನಗರದ ಎಲ್ಲಾ ಪಬ್‌ಗಳನ್ನು ಮುಚ್ಚಬೇಕು” ಎಂದು ತೆಲಂಗಾಣದ ಕಾಂಗ್ರೆಸ್ ನಾಯಕ ಅಂಜನ್ ಕುಮಾರ್ ಯಾದವ್ ಹೇಳಿದ್ದಾರೆ.
ಬಂಜಾರಾ ಹಿಲ್ಸ್‌ನಲ್ಲಿರುವ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶಿವಚಂದ್ರ ಅವರನ್ನು ಕರ್ತವ್ಯ ನಿರ್ಲಕ್ಷ್ಯಕ್ಕಾಗಿ ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಅಮಾನತುಗೊಳಿಸಿದ್ದಾರೆ. ಅವರ ಸ್ಥಾನಕ್ಕೆ ಕೆ ನಾಗೇಶ್ವರ ರಾವ್ ಅವರನ್ನು ಟಾಸ್ಕ್ ಫೋರ್ಸ್ ನಿಂದ ನೇಮಿಸಲಾಗಿದೆ.