Advertisement

ಚಿತ್ರನಟ ಯಶ್‌ ಕರಾವಳಿಯಲ್ಲಿ ತೀರ್ಥಯಾತ್ರೆ

09:43 AM Dec 17, 2018 | Team Udayavani |

ಕೊಲ್ಲೂರು/ ಧರ್ಮಸ್ಥಳ/ ಸುಬ್ರಹ್ಮಣ್ಯ: ಕನ್ನಡ ಚಲನಚಿತ್ರ ರಂಗದ ಖ್ಯಾತ ಯುವ ನಟ ಯಶ್‌ ಅವರು ರವಿವಾರ ಕರಾವಳಿಯ ಪ್ರಮುಖ ದೇಗುಲಗಳಿಗೆ ಭೇಟಿ ನೀಡಿ ಪೂಜೆ, ಸೇವೆ ಸಲ್ಲಿಸಿದರು. 

Advertisement

ಇತ್ತೀಚೆಗೆ ಹೆಣ್ಣುಮಗುವಿನ ತಂದೆಯಾಗಿರುವ ಯಶ್‌ ಅವರ ಹೊಸ ಸಿನೆಮಾ ಬಿಡುಗಡೆಯ ಹಂತದಲ್ಲಿದೆ. ಕರಾವಳಿ ತೀರ್ಥಯಾತ್ರೆಯ ಆರಂಭದಲ್ಲಿ ಯಶ್‌ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕೊಲ್ಲೂರು ದೇಗುಲಕ್ಕೆ ರೂ. 1.06 ಲಕ್ಷ ದೇಣಿಗೆ ನೀಡಿದರು.

ಕೊಲ್ಲೂರು ದೇಗುಲದ ಕಾರ್ಯನಿರ್ವಹಣಾಧಿಕಾರಿ ಎಚ್‌. ಹಾಲಪ್ಪ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಮೇಶ ಗಾಣಿಗ ಕೊಲ್ಲೂರು, ವಂಡಬಳ್ಳಿ ಜಯರಾಮ ಶೆಟ್ಟಿ, ಅರ್ಚಕರಾದ ಡಾ| ಕೆ.ಎನ್‌. ನರಸಿಂಹ ಅಡಿಗ, ಕೆ.ಎನ್‌. ಸುಬ್ರಹ್ಮಣ್ಯ ಅಡಿಗ, ಸುರೇಶ ಭಟ್‌, ಅಧೀಕ್ಷಕ ರಾಮಕೃಷ್ಣ ಅಡಿಗ ಇನ್ನಿತರರು ಉಪಸ್ಥಿತರಿದ್ದರು. ಬಳಿಕ ಯಶ್‌ ಧರ್ಮಸ್ಥಳ ಮತ್ತು ಸುರ್ಯ ದೇವಸ್ಥಾನಗಳಿಗೆ ಭೇಟಿ ನೀಡಿದರು. 

ಧರ್ಮಸ್ಥಳದ ಹೆಲಿಪ್ಯಾಡ್‌ಗೆ ಆಗಮಿಸಿದ ಯಶ್‌ ಅಲ್ಲಿಂದ ಸನ್ನಿಧಿ ವಸತಿ ಗೃಹಕ್ಕೆ ತೆರಳಿ, ಬೀಡಿಗೆ ಆಗಮಿಸಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ನೇರವಾಗಿ ಸುರ್ಯ ದೇವಸ್ಥಾನಕ್ಕೆ ತೆರಳಿದರು. ಮಣ್ಣಿನ ಹರಕೆಗಳಿಗೆ ಖ್ಯಾತಿ ಪಡೆದಿರುವ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ಯಶ್‌ ಮಣ್ಣಿನ ರೀಲ್‌ ಅನ್ನು ದೇವರಿಗೆ ಸಮರ್ಪಿಸಿದರು. 

ಧರ್ಮಸ್ಥಳ ಭೇಟಿಯ ಸಂದರ್ಭ ಹೇಮಾವತಿ ವೀ. ಹೆಗ್ಗಡೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.  ಆ ಬಳಿಕ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಯಶ್‌ ತಮ್ಮ ಅಭಿನಯದ ಕೆ.ಜಿ.ಎಫ್‌. ಚಲನಚಿತ್ರ ಯಶಸ್ಸಿಗೆ ಹಾಗೂ ಕುಟುಂಬಕ್ಕೆ ಒಳಿತಾಗಲೆಂದು ದೇವರ ಅನುಗ್ರಹ ಪಡೆಯಲು ಬಂದಿದ್ದಾಗಿ ಹೇಳಿದರು. ಪೂಜೆ, ಸೇವೆ ಸಲ್ಲಿಸಿದ ಬಳಿಕ ಯಶ್‌ ಅನ್ನದಾನ ನಿಧಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಹಾಗೂ ಚಲನಚಿತ್ರ ಸಂಸ್ಥೆ ಹೆಸರಿನಲ್ಲಿ 1.08 ಲಕ್ಷ ರೂ. ದೇಣಿಗೆ ನೀಡಿದರು.

Advertisement

ಹೆಲಿಕಾಪ್ಟರ್‌ ಸುತ್ತಾಟ
ಕೊಲ್ಲೂರಿನ ಅರೆಶಿರೂರಿನ ತನಕ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಯಶ್‌ ಅಲ್ಲಿಂದ ರಸ್ತೆಯ ಮಾರ್ಗವಾಗಿ ಕೊಲ್ಲೂರು ಕ್ಷೇತ್ರಕ್ಕೆ ಸಾಗಿದರು. ಧರ್ಮಸ್ಥಳ, ಸುಬ್ರಹ್ಮಣ್ಯಗಳಿಗೂ ಅವರ ಯಾತ್ರೆ ಹೆಲಿಕಾಪ್ಟರ್‌ ಮೂಲಕ ನಡೆದಿತ್ತು. ಎಲ್ಲ ಕಡೆ ಅಭಿಮಾನಿಗಳು ನೆಚ್ಚಿನ ನಟನನ್ನು ಕಾಣಲು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next