ಯಶ್ ಶೆಟ್ಟಿ- ಸದ್ಯ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಲ್ಲಿ ಕೇಳಿಬರುತ್ತಿರುವ ಹೆಸರು. ನೆಗೆಟಿವ್, ಪಾಸಿಟಿವ್ … ಹೀಗೆ ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿರುವ ಯಶ್ ಶೆಟ್ಟಿ ಈಗ “ಬೇರ’ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಕರಾವಳಿಯ ಧರ್ಮ ಸಂಘರ್ಷದ ಸುತ್ತ ತಯಾರಾಗಿರುವ ಈ ಸಿನಿಮಾದಲ್ಲಿ ಯಶ್ ಶೆಟ್ಟಿ ಸಲೀಮ್ ಎಂಬ ಪಾತ್ರ ಮಾಡಿದ್ದಾರೆ. ಕಲ್ಲಡ್ಕದ ಮ್ಯೂಸಿಯಂವೊಂದರಲ್ಲಿ ಇರುವ ಮುಸ್ಲಿಂ ಹುಡುಗನ ಕುರಿತಾದ ನೈಜ ಪಾತ್ರ. ಈಗಾಗಲೇ ಟ್ರೇಲರ್ ನೋಡಿದವರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಈ ಕುರಿತು ಮಾತನಾಡುವ ಯಶ್ ಶೆಟ್ಟಿ, “ಬೇರ ಕನ್ನಡಕ್ಕೆ ಒಂದು ಹೊಸ ಬಗೆಯ ಸಿನಿಮಾವಾಗಲಿ ದೆ. ನಾನಿಲ್ಲಿ ಸಲೀಂ ಎಂಬ ಪಾತ್ರ ಮಾಡಿದ್ದೇನೆ. ನೈಜವಾದ ಪಾತ್ರ. ಕಲ್ಲಡ್ಕದ ಮ್ಯೂಸಿಯಂನಲ್ಲಿರುವ ಹುಡುಗ. ಆತನಿಗೊಬ್ಬ ವಿಷ್ಣು ಎಂಬ ಆತ್ಮ ಸ್ನೇಹಿತ. ಇವರಿಬ್ಬರ ಸ್ನೇಹದ ನಡುವೆ ಧರ್ಮ ಸೇರಿಕೊಂಡು, ಮುಂದೆ ಅದು ಯಾವ ರೀತಿ ಟ್ವಿಸ್ಟ್-ಟರ್ನ್ ಪಡೆಯುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ’ ಎನ್ನುತ್ತಾರೆ.
ಅಂದಹಾಗೆ, ಇದೊಂದು ಸೂಕ್ಷ್ಮವಾದ ಪಾತ್ರ. ಈ ಪಾತ್ರ ಮಾಡುವುದು ಸವಾಲಾಗಿತ್ತೇ ಎಂದರೆ, “ಎಲ್ಲಾ ಪಾತ್ರಗಳು ಸವಾಲಾಗಿರುತ್ತದೆ. ನಾನೊಬ್ಬ ನಟನನಾಗಿ ಹಿಂದೆ-ಮುಂದೆ ನೋಡಬಾರದು. ನಿರ್ದೇಶಕರ ಕಲ್ಪನೆಗೆ ನಾನು ನ್ಯಾಯ ಸಲ್ಲಿಸಬೇಕು. ಆಗ ಮಾತ್ರ ನಾನು ಈ ಕ್ಷೇತ್ರ ಆಯ್ಕೆ ಮಾಡಿರುವುದಕ್ಕೆ ನ್ಯಾಯ ಸಿಕ್ಕಂತಾಗುತ್ತದೆ’ ಎನ್ನುತ್ತಾರೆ. ಚಿತ್ರದಲ್ಲಿ ನಿರ್ದೇಶಕರು ಹಲವು ಅಂಶಗಳನ್ನು ಹೇಳಿದ್ದಾರೆ ಎನ್ನುವ ಯಶ್ ಶೆಟ್ಟಿ, ಸದ್ಯ “ಬೇರ’ದ ನಿರೀಕ್ಷೆಯಲ್ಲಿರುವುದು ಸುಳ್ಳಲ್ಲ. “ಎಸ್.ಎಲ್.ವಿ ಕಲರ್ಸ್’ ಲಾಂಛನದಲ್ಲಿ ದಿವಾಕರ ದಾಸ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ವಿನು ಬಳಂಜ ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ದತ್ತಣ್ಣ, ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಛ, ಅಶ್ವಿನ್ ಹಾಸನ್, ಚಿತ್ಕಲ ಬಿರಾದಾರ್, ಮಂಜುನಾಥ್ ಹೆಗಡೆ, ಗುರು ಹೆಗಡೆ, ರಾಕೇಶ್ ಮಯ್ಯ, ಧವಳ್ ದೀಪಕ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರ ಜೂನ್ 16ರಂದು ತೆರೆಕಾಣುತ್ತಿದೆ.