ಕೋಲ್ಕತ : ಟಿವಿ ಆ್ಯಂಕರ್ ಮತ್ತು ಮಾಡೆಲ್ ಆಗಿದ್ದ ಸೋನಿಕಾ ಚೌಹಾಣ್ ಅವರ ಸಾವಿಗೆ ಕಾರಣವಾದ ಕಾರು ಅಪಘಾತ ಎಸಗಿ “ಕೊಲೆಯಲ್ಲದ ನರಹತ್ಯೆ’ಯ ಆರೋಪ ಎದುರಿಸುತ್ತಿದ್ದ ನಟ ವಿಕ್ರಮ್ ಚಟರ್ಜಿ ಅವರನ್ನು ಬಂಧಿಸಲಾಗಿರುವುದಾಗಿ ಪೊಲೀಸರು ಇಂದು ತಿಳಿಸಿದ್ದಾರೆ.
ಟಿವಿ ಮತ್ತು ಚಿತ್ರ ನಟರಾಗಿರುವ ವಿಕ್ರಮ್ ಚಟರ್ಜಿ ಅವರನ್ನು ಪೊಲೀಸು ನಿನ್ನೆ ಗುರುವಾರ ಮಧ್ಯರಾತ್ರಿಯ ವೇಳೆಗೆ ದಕ್ಷಿಣ ಕೋಲ್ಕತದ ಕಸ್‌ಬಾ ಪ್ರದೇಶದಲ್ಲಿರುವ ರಾಶ್‌ಬೆಹಾರಿ ಅವೆನ್ಯೂ ಮಾರ್ಗದಲ್ಲಿನ ಆ್ಯಕ್ರೋಪೊಲೀಸ್ ಮಾಲ್‌ನ ಹೊರಗೆ ಕ್ಯಾಬ್‌ನಲ್ಲಿ ಕೂತಿದ್ದಾಗ ಬಂಧಿಸಿದರು.
ಮಾಡೆಲ್ ಸೋನಿಕಾ ಚೌಹಾಣ್ ಸಾವಿಗೆ ಕಾರಣವಾದ ಕಾರು ಅಪಘಾತ ಎಸಗಿದ ಪ್ರಕರಣದಲ್ಲಿ ಪೊಲೀಸರು ತನ್ನ ವಿರುದ್ಧ “ಕೊಲೆಯಲ್ಲದ ನರಹತ್ಯೆ’ ಪ್ರಕರಣವನ್ನು ದಾಖಲಿಸಿಕೊಂಡದ್ದನ್ನು ಅನುಸರಿಸಿ ವಿಕ್ರಂ ಚಟರ್ಜಿ ತಲೆ ಮರೆಸಿಕೊಂಡಿದ್ದರು.
ಕಳೆದ ಎಪ್ರಿಲ್ 29ರ ನಸುಕಿನ ವೇಳೆ ವಿಕ್ರಂ ಚಟರ್ಜಿ ಅತ್ಯಂತ ವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಎಸಗಿದ ಅಪಘಾತದಲ್ಲಿ ಮಾಡೆಲ್ ಸೋನಿಕಾ ಮೃತಪಟ್ಟಿದ್ದರು.
ಎಪ್ರಿಲ್ 28ರ ಮಧ್ಯರಾತ್ರಿ ಪಾರ್ಟಿಯ ಬಳಿಕ ವಿಕ್ರಂ ಚಟರ್ಜಿ, ನಟಿ ಸೋನಿಕಾ ಅವರನ್ನು ಮನೆಗೆ ಬಿಡಲು ಕಾರು ಚಲಾಯಿಸುತ್ತಿದ್ದರು.