ಚೆನ್ನೈ: ನಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ಮಾತಿನ ಚಮತ್ಕಾರಕ್ಕಾಗಿ ಅಲ್ಲ, ಕೆಲಸ ಆಧಾರಿತ ರಾಜಕೀಯಕ್ಕೆ ಬದ್ಧವಾಗಿದೆ ಎಂದು ಪ್ರಖ್ಯಾತ ನಟ ಮತ್ತು ಪಕ್ಷದ ಅಧ್ಯಕ್ಷ ವಿಜಯ್ ರವಿವಾರ(ಅ 20) ಹೇಳಿಕೆ ನೀಡಿದ್ದಾರೆ.
ಅಕ್ಟೋಬರ್ 27 ರಂದು ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ನಡೆಯಲಿರುವ ಟಿವಿಕೆಯ ಮೊದಲ ರಾಜ್ಯ ಸಮ್ಮೇಳನಕ್ಕೆ ಮುಂಚಿತವಾಗಿ ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಪತ್ರ ಬರೆದಿರುವ ವಿಜಯ್, ‘ಕಡಮಿ, ಕಣ್ಣಿಯಂ, ಕಟ್ಟುಪ್ಪಾಡು’ (ಕರ್ತವ್ಯ, ಘನತೆ ಮತ್ತು ಶಿಸ್ತು)ತತ್ವವನ್ನು ಅನುಸರಿಸುವಂತೆ ತಮ್ಮ ಕಾರ್ಯಕರ್ತರಿಗೆ ಸೂಚಿಸಿದರು.
ರಾಜಕೀಯದಲ್ಲಿ ಯಶಸ್ಸು ಮತ್ತು ವೈಫಲ್ಯಗಳು ಮಾತ್ರ ಮಾನದಂಡವಲ್ಲ, ಸಿದ್ಧಾಂತಕ್ಕೆ ಬದ್ಧತೆಯ ಬಗೆಗಾಗಿದೆ. ಮಾತುಗಳ ಕಣ್ಣಾಮುಚ್ಚಾಲೆಯಲ್ಲಿ ತೊಡಗುವುದು ನಮ್ಮ ಕೆಲಸವಲ್ಲ. ನಮ್ಮ ರಾಜಕೀಯ ಮಾತೃಭಾಷೆಯು ಕೆಲಸ/ಕ್ರಿಯೆಯ ಭಾಷೆ” ಎಂದು ಉಲ್ಲೇಖಿಸಿದ್ದಾರೆ.
ಚೊಚ್ಚಲ ರಾಜ್ಯ ಸಮ್ಮೇಳನದ ಕೆಲಸ ಸೇರಿದಂತೆ ರಾಜಕೀಯದಲ್ಲಿ ಟಿವಿಕೆ ಕಾರ್ಯಕರ್ತರು ಒಳನೋಟವುಳ್ಳವರು ಎಂಬ ಬಲವಾದ ಪ್ರಭಾವವನ್ನು ಜನರಲ್ಲಿ ಮೂಡಿಸಲಿದ್ದಾರೆ ಎಂದು ವಿಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗರ್ಭಿಣಿಯರು, ಶಾಲಾ ಮಕ್ಕಳು, ಅನಾರೋಗ್ಯದಿಂದ ಬಳಲುತ್ತಿರುವವರು ಮತ್ತು ವೃದ್ಧರು ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳದಂತೆ ವಿಜಯ್ ಮನವಿ ಮಾಡಿದ್ದಾರೆ.
‘ಕರ್ತವ್ಯ, ಘನತೆ ಮತ್ತು ಶಿಸ್ತು’ ಡಿಎಂಕೆ ಸಂಸ್ಥಾಪಕ ಮತ್ತು ದ್ರಾವಿಡ ಐಕಾನ್, ಅಣ್ಣಾದೊರೈ ಅವರು ಆಗಾಗ್ಗೆ ಉಲ್ಲೇಖಿಸುತ್ತಿದ್ದ ಪ್ರಸಿದ್ಧ ತತ್ವವಾಗಿದೆ’ ಎನ್ನುವುದು ಗಮನಾರ್ಹ.