“ಇಷ್ಟು ವರ್ಷ ಸಿನಿಮಾ ಮಾಡಲಿಲ್ಲ, ಸಿನಿಮಾದಿಂದ ದೂರವಿದ್ದೆ ಎನ್ನುವ ಭಾವನೆ ಚಿತ್ರರಂಗದಲ್ಲಿ ಮತ್ತು ನನ್ನಲ್ಲಿ ಇದ್ದರೂ, ಈ ಸಿನಿಮಾ ಆ ಎಲ್ಲ ಭಾವನೆಯನ್ನೂ ದೂರ ಮಾಡಲಿದೆ. ನನ್ನ ಮಟ್ಟಿಗೆ “ತುರ್ತು ನಿರ್ಗಮನ’ ಸಿನಿಮಾಕ್ಕಿಂತ ಒಳ್ಳೆಯ ಕಂ ಬ್ಯಾಕ್ ಸಿನಿಮಾ ಇನ್ನೊಂದು ಸಿಗೋದಕ್ಕೆ ಸಾಧ್ಯವೇ ಇಲ್ಲ! ಅಷ್ಟರ ಮಟ್ಟಿಗೆ ಈ ಸಿನಿಮಾದ ಮೇಲೆ ನನಗೆ ವಿಶ್ವಾಸವಿದೆ’ – ಇದು ನಾಯಕ ನಟ ಸುನೀಲ್ ರಾವ್ ಮಾತು.
ಹೌದು, “ಎಕ್ಸ್‌ಕ್ಯೂಸ್ ಮಿ’ ಖ್ಯಾತಿಯ ಸುನೀಲ್ ರಾವ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ, ಬಳಿಕ ಬಣ್ಣದ ಲೋಕದಿಂದ ಕೊಂಚ ಗ್ಯಾಪ್ ತೆಗೆದುಕೊಂಡಿದ್ದರು. ಸುಮಾರು ಒಂದು ದಶಕದ ಬಳಿಕ ಸುನೀಲ್ ರಾವ್ ಇದೀಗ “ತುರ್ತು ನಿರ್ಗಮನ’ ಸಿನಿಮಾದ ಮೂಲಕ ಭರ್ಜರಿಯಾಗಿ ಕಂ ಬ್ಯಾಕ್ ಮಾಡಲು ರೆಡಿ ಆಗಿದ್ದಾರೆ.
ಅಂದಹಾಗೆ, ಸುನೀಲ್ ರಾವ್ ನಾಯಕನಾಗಿ ಅಭಿನಯಿಸಿರುವ “ತುರ್ತು ನಿರ್ಗಮನ’ ಇದೇ ಜೂ. 24ರಂದು ತೆರೆ ಕಾಣುತ್ತಿದೆ. ಇದೇ ವೇಳೆ ಮಾತಿಗೆ ಸಿಕ್ಕ ಸುನೀಲ್ ರಾವ್ ತಮ್ಮ ಸಿನಿಮಾದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.
“”ಎಕ್ಸ್‌ಕ್ಯೂಸ್ ಮಿ’ ಸಿನಿಮಾದಲ್ಲಿ ತುಂಬ ಜೋಶ್ ಆಗಿರುವ, ಎನರ್ಜಿಟಿಕ್ ಆಗಿರುವಂಥ ಪಾತ್ರವಿತ್ತು. ಆದ್ರೆ ಈ ಸಿನಿಮಾದಲ್ಲಿ ಅದಕ್ಕೆ ಸಂಪೂರ್ಣ ತದ್ವಿರುದ್ದ ಇರುವಂಥ ಪಾತ್ರ. ಸದಾ ಸೋಂಬೇರಿಯಾಗಿರುವ, ಆಲಸ್ಯವನ್ನೇ ಹೊದ್ದು ಮಲಗಿರುವಂಥ, ತುಂಬ ಉಡಾಫೆಯಾಗಿರುವಂಥ, ಜೀವನದಲ್ಲಿ ಗೊತ್ತು -ಗುರಿಯಿಲ್ಲದ, ಆದ್ರೆ ತನ್ನನ್ನು ತಾನು ತುಂಬ ಶ್ರೇಷ್ಟ ಎಂಬ ಭ್ರಮೆಯಲ್ಲಿರುವಂಥ ವಿಕ್ರಂ ಎಂಬ ಹುಡುಗನ ಪಾತ್ರ ನನ್ನದು. ಇಂಥ ಹುಡುಗನೊಬ್ಬನಿಗೆ ಇದ್ದಕ್ಕಿದ್ದಂತೆ ಲೈಫ್ನ ಎಂಡ್ ಸ್ಟೇಜ್ ಬಂದಾಗ ಹೇಗೆ ರಿಯಾಕ್ಟ್ ಮಾಡುತ್ತಾನೆ ಅನ್ನೋದು ಸಿನಿಮಾ. ಅದು ಹೇಗೆ ಅನ್ನೋ ಸಸ್ಪೆನ್ಸ್‌ನ ಸ್ಕ್ರೀನ್ ಮೇಲೆ ನೋಡಬೇಕು’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಡುತ್ತಾರೆ ಸುನೀಲ್.
“ಇಷ್ಟು ವರ್ಷಗಳಿಂದ ನಾನು ಕಂ ಬ್ಯಾಕ್ ಮಾಡೋದಕ್ಕೆ ಯಾವ ಥರದ ಸಬೆjಕ್ಟ್ ಹುಡುಕುತ್ತಿದ್ದೆನೋ, ಆ ಸಬ್ಜೆಕ್ಟ್ “ತುರ್ತು ನಿರ್ಗಮನ’ ಸಿನಿಮಾದಲ್ಲಿ ನನ್ನನ್ನು ಹುಡುಕಿಕೊಂಡು ಬಂದಿತು. ತಡ ಮಾಡದೆ ಸಿನಿಮಾ ಒಪ್ಪಿಕೊಂಡೆ. ನನಗಂತೂ ಈ ಸಿನಿಮಾದ ಸಬ್ಜೆಕ್ಟ್ ಮೇಲೆ ಸಂಪೂರ್ಣ ಭರವಸೆಯಿದೆ. ಈಗಾಗಲೇ ಟ್ರೇಲರ್ ಗೆ ಬಿಗ್ ರೆಸ್ಪಾನ್ಸ್ ಸಿಗುತ್ತಿದೆ. ಆಡಿಯನ್ಸ್‌ಗೂ ಖಂಡಿತವಾಗಿಯೂ ಸಿನಿಮಾ ಇಷ್ಟವಾಗುತ್ತದೆ’ ಎಂಬ ಭರವಸೆಯ ಮಾತನಾಡುತ್ತಾರೆ ಸುನೀಲ್ ರಾವ್.
ಇದನ್ನೂ ಓದಿ:ದಿನನಿತ್ಯ ಜೀವನದಲ್ಲಿ ಯೋಗ ಅಭ್ಯಾಸವನ್ನು ಅಳವಡಿಸಿಕೊಳ್ಳಿ: ತಾರಾ
“ತುರ್ತು ನಿರ್ಗಮನ’ ಚಿತ್ರತಂಡದ ಬಗ್ಗೆ ಮಾತನಾಡುವ ಸುನೀಲ್ ರಾವ್, “ಇಡೀ ಚಿತ್ರತಂಡ ಅತ್ಯಂತ ವೃತ್ತಿಪರವಾಗಿ ಈ ಸಿನಿಮಾವನ್ನು ಮಾಡಿದೆ. ಕಲಾವಿದರು, ತಂತ್ರಜ್ಞರ ಪರಿಶ್ರಮ ಸಿನಿಮಾದ ಪ್ರತಿ ಫ್ರೇಮ್‌ನಲ್ಲೂ ಕಾಣುತ್ತದೆ. ಒಂದೊಳ್ಳೆ ಸಿನಿಮಾ, ಒಂದೊಳ್ಳೆ ಟೀಮ್ ಜೊತೆಗೆ ಮತ್ತೆ ಬಿಗ್ ಸ್ಕ್ರೀನ್‌ಗೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರೇ ಮಾತನಾಡುತ್ತಾರೆ’ ಎನ್ನುತ್ತಾರೆ ಸುನೀಲ್ ರಾವ್.
ಹೇಮಂತ್ ಕುಮಾರ್ ನಿರ್ದೇಶನದ “ತುರ್ತು ನಿರ್ಗಮನ’ ಚಿತ್ರದಲ್ಲಿ ಸುನೀಲ್ ರಾವ್ ಅವರೊಂದಿಗೆ ಸುಧಾರಾಣಿ, ರಾಜ್ ಬಿ. ಶೆಟ್ಟಿ, ಅಚ್ಯುತ ಕುಮಾರ್, ಅರುಣಾ ಬಾಲರಾಜ್, ಹಿತಾ ಚಂದ್ರಶೇಖರ್, ಸಂಯುಕ್ತಾ ಹೆಗ್ಡೆ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.